Monday, August 27, 2012

ಇಂಥ ಪ್ರತಿಭಟನೆಗಳಿಂದ ನಾವು ಗಳಿಸುವುದಾದರೂ ಏನನ್ನು?

     2012 ಆಗಸ್ಟ್ 11, ಶನಿವಾರ
ಮುಂಬೈಯ ಆಝಾದ್ ಮೈದಾನದಲ್ಲಿ ಪ್ರತಿಭಟನೆ
2 ಸಾವು
50ರಷ್ಟು ಪೊಲೀಸರ ಸಹಿತ 63 ಮಂದಿಗೆ ಗಾಯ
34 ಬಸ್ಸುಗಳು ಬೆಂಕಿಗಾಹುತಿ
1857ರ ಪ್ರಥಮ ಸ್ವಾತಂತ್ರ್ಯ  ಸಂಗ್ರಾಮದಲ್ಲಿ ಸಾವಿಗೀಡಾದ ಯೋಧರ ಸ್ಮರಣಾರ್ಥ ಕಟ್ಟಲಾಗಿದ್ದ `ಅಮರ್ ಜವಾನ್' ಸ್ಮಾರಕಕ್ಕೆ ಹಾನಿ..
     ಆಗಸ್ಟ್ 17, ಶುಕ್ರವಾರ
ಲಕ್ನೋದ ತಿಲೆವಾರಿ ಮಸೀದಿಯಿಂದ ವಿಧಾನಸೌಧಕ್ಕೆ ಪ್ರತಿಭಟನಾ ಮೆರವಣಿಗೆ
ಬುದ್ಧ ಪ್ರತಿಮೆಗೆ ಹಾನಿ
ಹಲವರಿಗೆ ಗಾಯ, ಅನೇಕ ವಾಹನಗಳು ಜಖಂ
ಆಜ್ ತಕ್ ಚಾನೆಲ್‍ನ ಓಬಿ (outside broadcasting) ವಾಹನ ಪ್ರತಿಭಟನಾಕಾರರಿಂದ ಧ್ವಂಸ..
         ಅಸ್ಸಾಮ್ ಮತ್ತು ಮ್ಯಾನ್ಮಾರ್‍ನ ಕುರಿತಂತೆ ಮುಸ್ಲಿಮರು ಕಳೆದೆರಡು ವಾರಗಳಲ್ಲಿ ನಡೆಸಿದ ಪ್ರತಿಭಟನೆಯ ಫಲಿತಾಂಶಗಳಿವು. ಇವನ್ನು ಹೇಗೆ ಸಮರ್ಥಿಸುವುದು? ಅನ್ಯಾಯವನ್ನು ಖಂಡಿಸಿ ನಡೆಸಲಾಗುವ ಪ್ರತಿಭಟನೆಗಳೇ ಅನ್ಯಾಯದ ರೂಪವನ್ನು ಪಡಕೊಳ್ಳುವುದಕ್ಕೆ ಏನೆನ್ನಬೇಕು? ಇಂಥವು ಯಾರಿಗೆ ಲಾಭ ತಂದುಕೊಡಬಲ್ಲುದು? ಈ ಎರಡು ಪ್ರತಿಭಟನೆಗಳಲ್ಲಿ ಪ್ರಶಾಂತ್ ಸಾವಂತ್, ಸಈದ್ ಝೈದಿ ಮತ್ತು ಜಿತೇಂದ್ರ ಪಾಂಡೆ ಎಂಬ ಮಾಧ್ಯಮ ಪೊಟೋಗ್ರಾಫರ್‍ಗಳು ಗಾಯಗೊಂಡರು. ಲಕ್ನೋ ವಿಧಾನ ಸೌಧದ ಎದುರು ಪತ್ರಕರ್ತರು ಧರಣಿ ಕೂತರು. ಒಂದು ರೀತಿಯಲ್ಲಿ ಈ ಎರಡು ಘಟನೆಗಳ ಬಳಿಕ ಮ್ಯಾನ್ಮಾರ್ ಮತ್ತು ಅಸ್ಸಾಮ್‍ಗಳಿಗಿಂತ ಹೆಚ್ಚು ಮಾಧ್ಯಮಗಳಲ್ಲಿ ಚರ್ಚೆಗೊಳಗಾದದ್ದು ಈ ಪ್ರತಿಭಟನೆಗಳೇ. ಅಸ್ಸಾಮ್‍ನಲ್ಲಿ ಬೋಡೋಗಳು ನಡೆಸುತ್ತಿರುವ ಮುಸ್ಲಿಮರ ಜನಾಂಗೀಯ ನಿರ್ಮೂಲನಕ್ಕೆ, `ಅಕ್ರಮ ವಲಸಿಗರ ಸಮಸ್ಯೆ' ಎಂಬ ಅಕ್ರಮ ಹೆಡ್‍ಲೈನ್ ಕೊಟ್ಟು ಸುಳ್ಳು ಪ್ರಚಾರ ನಡೆಸುತ್ತಿರುವವರನ್ನು ಖಂಡಿಸುತ್ತಿರುವ ಮಾಧ್ಯಮ ಮಿತ್ರರೇ ಈ ಪ್ರತಿಭಟನೆಗಳಿಂದ ಹತಾಶರಾದರು. ಪ್ರತಿಭಟನಾಕಾರರ ಉದ್ದೇಶ ಶುದ್ಧಿಯ ಬಗ್ಗೆಯೇ ಅನುಮಾನಿಸಿದರು. ಮುಸ್ಲಿಮರ ಮುಂದೆ ಅನೇಕಾರು ಪ್ರಶ್ನೆಗಳನ್ನು ಇಟ್ಟರು. ನೀವೇಕೆ ಹೀಗೆ ಎಂದು ಪ್ರಶ್ನಿಸಿದರು..
      1. ನಮಾಝ್ ಎಂಬುದು ಸಹನೆಯ, ಶಾಂತಿಯ ದ್ಯೋತಕ ಎಂದಾದರೆ ಮಸೀದಿಯಿಂದ ಹೊರಬಿದ್ದ ಕೂಡಲೇ ಮುಸ್ಲಿಮರು ಸಹನೆಯನ್ನು ಕಳಕೊಳ್ಳುವುದೇಕೆ?
      2. ಹುತಾತ್ಮ ಯೋಧರ ಸ್ಮಾರಕವನ್ನು ಗುರುತಿಸಲಾರದಷ್ಟೂ ಅಥವಾ ಅದಕ್ಕೆ ಗೌರವ ಕೊಡಲಾರದಷ್ಟೂ ಮುಸ್ಲಿಮರು ಅಜ್ಞಾನಿಗಳೇ?
      3. ಬುದ್ಧ ಪ್ರತಿಮೆಯನ್ನು ಘಾಸಿಗೊಳಿಸಿದ್ದು ಏನನ್ನು ಸೂಚಿಸುತ್ತದೆ?
      4. ಮುಸ್ಲಿಮರು ಕೇವಲ ಮುಸ್ಲಿಮರಿಗಾಗಿ ಮಾತ್ರ ಪ್ರತಿಭಟಿಸುವುದೇಕೆ? ಟಿಬೇಟಿಯನ್ನರು, ಕಾಶ್ಮೀರಿ ಪಂಡಿತರು, ಪಾಕಿಸ್ತಾನದ ಹಿಂದೂಗಳು, ಲಂಕಾದ ತಮಿಳರ ಮೇಲೆ ಆಗುತ್ತಿರುವ ಅನ್ಯಾಯಗಳ ವಿರುದ್ಧವೂ ಮುಸ್ಲಿಮರೇಕೆ ಪ್ರತಿಭಟಿಸುವುದಿಲ್ಲ?
      5. ಮ್ಯಾನ್ಮಾರ್ ಮತ್ತು ಅಸ್ಸಾಮ್‍ಗಾಗಿ ಸಣ್ಣ ಸಣ್ಣ ಪಟ್ಟಣಗಳಲ್ಲೂ ಮುಸ್ಲಿಮರು ಪ್ರತಿಭಟಿಸಿದ್ದಾರೆ. ಆದರೆ ಮುಸ್ಲಿಮ್ ಬಹುಸಂಖ್ಯಾತ ಪ್ರದೇಶಗಳಲ್ಲಿರುವ ಶಾಲೆಗೆ ಸೂಕ್ತ ಶಿಕ್ಷಕರನ್ನು ಒದಗಿಸುವುದಕ್ಕಾಗಿ, ನೀರಿಗೆ, ರಸ್ತೆಗಾಗಿ ಇದೇ ಸ್ಫೂರ್ತಿಯಲ್ಲಿ ಮುಸ್ಲಿಮರು ಯಾಕೆ ಪ್ರತಿಭಟನೆ ಹಮ್ಮಿಕೊಳ್ಳುತ್ತಿಲ್ಲ?
      6. ಮ್ಯಾನ್ಮಾರ್‍ನ ಮುಸ್ಲಿಮರಿಗಾಗಿ ಭಾರತೀಯ ಮುಸ್ಲಿಮರೇಕೆ ಕಣ್ಣೀರು ಹಾಕಬೇಕು? ಜಗತ್ತಿನ ಯಾವುದೋ ಮೂಲೆಯಲ್ಲಿರುವ ಮುಸ್ಲಿಮರ ನೋವು, ಇನ್ನಾವುದೋ ಮೂಲೆಯಲ್ಲಿರುವ ಮುಸ್ಲಿಮರ ನೋವಾಗುವುದಾದರೂ ಹೇಗೆ?
       ಇನ್ನೂ ಇವೆ..
      ಇಷ್ಟಕ್ಕೂ, ಇಲ್ಲಿರುವ ಪ್ರಶ್ನೆಗಳೆಲ್ಲಾ ಉತ್ತರಿಸಲೇಬೇಕಾದಷ್ಟು ತೂಕ ಉಳ್ಳವು ಎಂದಲ್ಲ. ಅಲ್ಲದೇ, ಇಲ್ಲಿ ಪ್ರಶ್ನೆಗಳನ್ನು ತೇಲಿ ಬಿಟ್ಟವರಲ್ಲಿ, ಟಿಬೆಟ್, ನೇಪಾಳ, ಲಂಕಾ, ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ಲಕ್ಷಾಂತರ ಮಂದಿಯನ್ನು ನಿರಾಶ್ರಿತರೆನ್ನುತ್ತಾ, ಬಂಗ್ಲಾದಿಂದ ಬಂದವರನ್ನು ಮಾತ್ರ ಅಕ್ರಮ ವಲಸಿಗರೆಂದು ಕರೆಯುವ ಪಕ್ಕಾ ಕೋಮುವಾದಿಗಳೂ ಇದ್ದಾರೆ. 1983ರ ಜುಲೈಯಲ್ಲಿ (ಬ್ಲಾಕ್ ಜುಲೈ) 1,34,053 ಲಂಕಾ ತಮಿಳರು ಭಾರತಕ್ಕೆ ಬಂದರು. 1989ರಲ್ಲಿ ಮತ್ತೆ 1,22,000 ಮಂದಿ ತಮಿಳರು ಈ ದೇಶಕ್ಕೆ ಕಾಲಿಟ್ಟರು. ಮಾತ್ರವಲ್ಲ, ರಾಜೀವ್ ಗಾಂಧಿಯನ್ನು ಕೊಂದ ಆರೋಪ ಕೂಡ ಈ ವಲಸಿಗರ ಮೇಲೆಯೇ ಇದೆ. ಆದರೆ ಬಂಗ್ಲಾ ಅಕ್ರಮ ವಲಸಿಗರ ಬಗ್ಗೆ ಪುಟಗಟ್ಟಲೆ ಬರೆಯುವ ಯಾರೂ ಈ ಸತ್ಯವನ್ನು ಹೇಳುತ್ತಲೇ ಇಲ್ಲ. 2001ರಲ್ಲಿ ಗುಜರಾತ್‍ನಲ್ಲಿ ನಡೆದ ಹತ್ಯಾಕಾಂಡದ ಸಂದರ್ಭದಲ್ಲಿ ಪಂಜಾಬ್‍ನ ಅಮೃತ್‍ಸರದಲ್ಲಿ ಶೌರ್ಯ ಸ್ಮೃತಿ  ಸಮ್ಮಾನ್ ಎಂಬ ಸಮಾರಂಭವನ್ನು ಆರೆಸ್ಸೆಸ್ ಹಮ್ಮಿಕೊಂಡಿತ್ತು. 1947ರ ಭಾರತ ವಿಭಜನೆಯ ವೇಳೆ ಪೂರ್ವ ಪಂಜಾಬ್‍ನಲ್ಲಿ ಮುಸ್ಲಿಮರ ಜನಾಂಗ ನಿರ್ಮೂಲನ ನಡೆದಿತ್ತು. ಆ ಕ್ರೌರ್ಯದಲ್ಲಿ ಭಾಗವಹಿಸಿದ ತನ್ನ ಕಾರ್ಯಕರ್ತರನ್ನು ಗೌರವಿಸುವುದಕ್ಕಾಗಿ ಹಮ್ಮಿಕೊಂಡ ಆ ಸಮಾರಂಭದ (ದಿ ಹಿಂದೂ, ಅಜಯ್ ಭಾರದ್ವಾಜ್, ಆಗಸ್ಟ್ 15, 2012) ಬಗ್ಗೆ, ಇವತ್ತು ಮುಂಬೈಯ `ಅಮರ್ ಜವಾನ್' ದಾಳಿಯ ಪೊಟೋವನ್ನು ಹಿಡಿದು ದೇಶಭಕ್ತಿ ಪ್ರದರ್ಶಿಸುತ್ತಿರುವ ಎಷ್ಟು ಮಂದಿ ಮಾತಾಡಿದ್ದಾರೆ? ಲೂಧಿಯಾನ ಜಿಲ್ಲೆಯ ಅಕಾಲ್‍ಘರ್(ಪೂರ್ವ ಪಂಜಾಬ್)ನಲ್ಲಿ ಮಸೀತ್ ವಾಲಾ ಗುರುದ್ವಾರ್ (ಗುರುದ್ವಾರವಾಗಿ ಬದಲಿಸಲಾದ ಮಸೀದಿ) ಇವತ್ತೂ ಇದೆ. ರಜಪೂತನ್ ದೆ ಗಾಲಿ (ರಜಪೂತ್ ಮುಸ್ಲಿಮರ ಬೀದಿ) ಮತ್ತು ತಾರು ಶಾ ದ ತೋಬಾ (ಸಂತ ತಾರೂ ಶಾ ಅವರ ಕೆರೆ) ಇದೆ. (ದಿ ಹಿಂದೂ, ಆಗಸ್ಟ್ 15, 2012) ಇಲ್ಲಿ ಮುಸ್ಲಿಮರೇ ಇಲ್ಲ.ಅವರನ್ನು ನಿರ್ಮೂಲನಗೊಳಿಸಲಾಗಿದೆ. ಆದರೆ ಯಾವನೋ ಒಬ್ಬ ಘಸ್ನಿಯೋ ಘೋರಿಯೋ ಹಿಂದೂ ದೇವಾಲಯಗಳನ್ನು ಲೂಟಿ ಮಾಡಿದ ಎಂದು ಹೇಳುತ್ತಾ ಮುಸ್ಲಿಮರನ್ನೆಲ್ಲ ಅಸಹಿಷ್ಣುಗಳು ಎಂಬಂತೆ ಬಿಂಬಿಸುವ ಮಂದಿಯೆಲ್ಲಾ ಈ ಬಗ್ಗೆ ಯಾಕೆ ಮಾತನ್ನೇ ಆಡುತ್ತಿಲ್ಲ? ನಿಜವಾಗಿ, ನಮಾಝ್ ಮಾಡುವವರು ಇದ್ದಾಗ್ಯೂ ಒಂದು ಮಸೀದಿಯನ್ನು ಬಲವಂತದಿಂದ ದೇವಾಲಯವಾಗಿಯೋ ಗುರುದ್ವಾರವಾಗಿಯೋ ಬದಲಿಸುವುದು ಅಥವಾ ದೇವಾಲಯವನ್ನು ಬಲವಂತದಿಂದ ಮಸೀದಿಯಾಗಿಯೋ ಗುರುದ್ವಾರವಾಗಿಯೋ ಮಾಡುವುದು ಎರಡೂ ಕ್ರೌರ್ಯವೇ. ಆದ್ದರಿಂದಲೇ ಬಾಮಿಯಾನದಲ್ಲಿ ಬುದ್ಧ ಪ್ರತಿಮೆಯನ್ನು ಧ್ವಂಸಗೊಳಿಸಿದ ತಾಲಿಬಾನಿಗಳ ಕೃತ್ಯ ಮನುಷ್ಯ ವಿರೋಧಿಯಾಗುವುದು. ಇತರರ ಆರಾಧ್ಯರನ್ನು ಧ್ವಂಸ ಮಾಡುವುದು ಬಿಡಿ, ಅವುಗಳ ಬಗ್ಗೆ ನಿಂದನೆಯ ಮಾತು ಕೂಡ ಆಡಬಾರದು ಎಂದು ಪವಿತ್ರ ಕುರ್‍ಆನ್ (22: 40) ಹೇಳಿರುವಾಗ, ಲಕ್ನೋದ ಪ್ರತಿಭಟನಾಕಾರರು ಬುದ್ಧ ಪ್ರತಿಮೆಗೆ ಹಾನಿ ಮಾಡಿರುವುದು ಹೇಗೆ ಸಮರ್ಥನೀಯವಾಗುತ್ತದೆ?
         ಅಂದಹಾಗೆ, ಪ್ರತಿಭಟನೆಗಳು ಹಿಂಸಾತ್ಮಕ ರೂಪಕ್ಕೆ ತಿರುಗಿದ್ದು ಇದು ಮೊದಲೇನೂ ಅಲ್ಲ..
       ರೈಲ್ವೆ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಬಿಹಾರದ ವಿದ್ಯಾರ್ಥಿಗಳ ಮೇಲೆ ರಾಜ್ ಠಾಕ್ರೆಯ ಮಹಾರಾಷ್ಟ್ರ ನವನಿರ್ಮಾಣ ಸೇನೆಯ (MNS) ಕಾರ್ಯಕರ್ತರು 2008 ಆಕ್ಟೋಬರ್ 20ರಂದು ಮುಂಬೈಯಲ್ಲಿ ದಾಳಿ ನಡೆಸುತ್ತಾರೆ. ಅದರಿಂದಾಗಿ ಬಿಹಾರದ ಪವನ್ ಕುಮಾರ್ ಅನ್ನುವ ವಿದ್ಯಾರ್ಥಿ ಸಾವಿಗೀಡಾಗುತ್ತಾನೆ. ಠಾಕ್ರೆಯನ್ನು ಬಂಧಿಸಲಾಗುತ್ತದೆ. ಇದನ್ನು ಖಂಡಿಸಿ ಕಲ್ಯಾಣ್ ಗ್ರಾಮದಲ್ಲಿ ನಡೆಸಲಾದ ಪ್ರತಿಭಟನೆಗೆ ನಾಲ್ವರು ಬಲಿಯಾಗುತ್ತಾರೆ. 2010 ಡಿಸೆಂಬರ್‍ನಲ್ಲಿ ಶಿವಸೇನೆಯು ಪುಣೆಯಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳುತ್ತದೆ. ಅದಕ್ಕೆ ಪೂರ್ವಭಾವಿಯಾಗಿ ಪೊಲೀಸರು ಸೇನಾ ನಾಯಕರ ದೂರವಾಣಿಯನ್ನು ಕದ್ದಾಲಿಸುತ್ತಾರೆ. `ಗುಂಪು ಸೇರಿಸಿ, ಬಸ್‍ಗಳನ್ನು ಸುಡು, ಟಿ.ವಿ ಚಾನೆಲ್‍ಗಳಿಗೆ ಮಾಹಿತಿ ನೀಡು..' ಎಂದು ಶಿವಸೇನೆಯ ವಿಧಾನ ಪರಿಷತ್ತಿನ ಸದಸ್ಯರಾಗಿರುವ ನೀಲಮ್ ಘೋರೆಗೆ ಉದ್ಧವ್ ಠಾಕ್ರೆಯ ಸಹಾಯಕನಾಗಿದ್ದ (ಪಿ.ಎ.) ಮಿಲಿಂದ್ ನಾರ್ವೇಕರ್ ನಿರ್ದೇಶನ ನೀಡುತ್ತಿರುವುದು ಆ ಮೂಲಕ ಪತ್ತೆಯಾಗುತ್ತದೆ. (ದಿ ಹಿಂದೂ, ಆಗಸ್ಟ್ 15, 2012). ಬಹುಶಃ ಆಝಾದ್ ಮೈದಾನದಲ್ಲಿ ಮುಸ್ಲಿಮರ ಹಿಂಸಾತ್ಮಕ ಪ್ರತಿಭಟನೆಯನ್ನು ಖಂಡಿಸಿ ಕಳೆದ ವಾರ ರಾಜ್ ಠಾಕ್ರೆ ಪ್ರತಿಭಟನೆ ಹಮ್ಮಿಕೊಂಡಾಗ ಇವೆಲ್ಲ ನೆನಪಿರಲಿಲ್ಲವೋ ಏನೋ?
      ಆದರೆ..
      ಆಝಾದ್ ಮೈದಾನದ ಹಿಂಸಾತ್ಮಕ ಪ್ರತಿಭಟನೆಯನ್ನು ಪ್ರಶ್ನಿಸಿ ಮುಸ್ಲಿಮ್ ಕಾರ್ಯಕರ್ತನೋರ್ವ ಪ್ರಾಯೋಜಕರ ವಿರುದ್ಧ ಮುಂಬೈ ಪೊಲೀಸರಿಗೆ ದೂರು ಕೊಟ್ಟಿದ್ದಾನೆ. ಮುಸ್ಲಿಮ್ ವಕೀಲರೋರ್ವರು ರಾಜ್ಯ ಹೈಕೋರ್ಟಿನ ಮೆಟ್ಟಿಲೇರಿದ್ದಾರೆ. ಪ್ರಕರಣದ ಕುರಿತಂತೆ ಮುಂಬೈಯ ಮುಸ್ಲಿಮ್ ನಾಯಕರು ಟಿ.ವಿ. ಚಾನೆಲ್‍ಗಳ ಮೂಲಕ ಸಾರ್ವಜನಿಕರ ಕ್ಷಮೆ ಯಾಚಿಸಿದ್ದಾರಲ್ಲದೇ, ಪೊಲೀಸರಿಗೆ ಶರಣಾಗುವಂತೆ ಗಲಭೆಕೋರರಲ್ಲಿ ಮನವಿ ಮಾಡಿದ್ದಾರೆ. ನೀವೇ ಹೇಳಿ, ಮುಂಬೈ ಮತ್ತು ಲಕ್ನೋ ಪ್ರತಿಭಟನೆಗಳನ್ನು ಎತ್ತಿಕೊಂಡು, ಮುಸ್ಲಿಮರನ್ನು ಹೀನಾಯವಾಗಿ ಬಿಂಬಿಸುತ್ತಿರುವ ಬಲಪಂಥೀಯರಲ್ಲಿ ಇಂಥ ಒಂದೇ ಒಂದು ಉದಾಹರಣೆಯಾದರೂ ಇದೆಯೇ? ಗೋಧ್ರಾದಲ್ಲಿ ನಡೆದ ಕರಸೇವಕರ ಸಾವಿಗೆ ಪ್ರತಿಯಾಗಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಸಾವಿರಾರು ಮಂದಿಯ ಹತ್ಯೆ ನಡೆಯಿತಲ್ಲ, ಬಂದ್‍ಗೆ ಕರೆ ಕೊಟ್ಟವರು ಈ ವರೆಗೆ ಅದಕ್ಕಾಗಿ ಕ್ಷಮೆ ಯಾಚಿಸಿದ್ದಾರಾ? ಪೊಲೀಸರಿಗೆ ಶರಣಾಗಿ ಎಂದು ಕೊಲೆಗಾರರಿಗೆ ಆದೇಶಿಸಿದ್ದಾರಾ?
       ಹಾಗಂತ, ಮುಸ್ಲಿಮರ ಹಿಂಸಾತ್ಮಕ ಪ್ರತಿಭಟನೆಗಳನ್ನು ಸಮರ್ಥಿಸುವುದಕ್ಕಾಗಿ ಇವನ್ನೆಲ್ಲ ಪುರಾವೆಯಾಗಿ ಮಂಡಿಸುತ್ತಿದ್ದೇನೆ ಅಂದುಕೊಳ್ಳಬೇಡಿ..
       ಈಜಿಪ್ಟನ್ನು ಈ ಹಿಂದೆ ಆಳಿದ್ದ ಫರೋವ ಚಕ್ರವರ್ತಿಯ ಬಗ್ಗೆ ಪವಿತ್ರ ಕುರ್‍ಆನಿನಲ್ಲಿ ವಿಸ್ತೃತವಾಗಿ ಚರ್ಚಿಸಲಾಗಿದೆ. ಆತ ತನ್ನ ಸಾಮ್ರಾಜ್ಯದ ಗಂಡು ಮಕ್ಕಳನ್ನು ಕೊಲ್ಲುತ್ತಿದ್ದ, ಸಮಾಜವನ್ನು ಎರಡು ಪಂಗಡಗಳಾಗಿ ವಿಭಜಿಸಿ ಒಂದನ್ನು ಅವಮಾನಿಸುತ್ತಲೂ ಇನ್ನೊಂದನ್ನು ಗೌರವಿಸುತ್ತಲೂ ಇದ್ದ, ಭೂಮಿಯಲ್ಲಿ ಬಂಡಾಯ ಎದ್ದಿದ್ದ, ಮಹಾ ಅಕ್ರಮಿ ಆಗಿದ್ದ (ಪವಿತ್ರ ಕುರ್‍ಆನ್: 28: 4) ಅವನ ಬಳಿಗೆ ಪ್ರವಾದಿ ಮೂಸಾ(ಅ) (ಮೋಸೆಸ್)ರನ್ನು ಹೋಗುವಂತೆ ಮತ್ತು ಅನ್ಯಾಯ ಮಾಡಬೇಡವೆಂದು ಉಪದೇಶಿಸುವಂತೆ ಸೃಷ್ಟಿಕರ್ತನು ಆಜ್ಞಾಪಿಸುತ್ತಾನೆ. ಆದರೆ, ಆತನೊಂದಿಗೆ ಮಾತಾಡುವಾಗ ಮೃದುವಾಗಿ ಮಾತಾಡಬೇಕು (ಪವಿತ್ರ ಕುರ್‍ಆನ್: 20: 40) ಎಂದೂ ಆದೇಶಿಸುತ್ತಾನೆ. ಓರ್ವ ಅಕ್ರಮಿ ವ್ಯಕ್ತಿಯೊಂದಿಗೆ ಮಾತಾಡುವಾಗಲೂ ನಿಮ್ಮ ಭಾಷೆ, ವರ್ತನೆ ಅಕ್ರಮ ರೂಪದಲ್ಲಿರಬಾರದು ಎಂದು ಕುರ್‍ಆನ್ ಕಲಿಸುವಾಗ, ಮುಸ್ಲಿಮರ ಪ್ರತಿಭಟನೆಗಳು ಹಿಂಸಾತ್ಮಕವಾಗುವುದಾದರೂ ಏಕೆ? ಅಸ್ಸಾಮ್ ಇಲ್ಲವೇ ಮ್ಯಾನ್ಮಾರ್‍ನಲ್ಲಿ ಅನ್ಯಾಯವಾಗುತ್ತಿದೆಯೆಂದು ಹೇಳಿ ಮುಂಬೈಯಲ್ಲೋ ಲಕ್ನೋದಲ್ಲೋ ಸಾರ್ವಜನಿಕರ ಮೇಲೆ ದಾಳಿ ಮಾಡುವುದು, ಸೊತ್ತುಗಳಿಗೆ ಹಾನಿ ಮಾಡುವುದನ್ನು ಯಾಕೆ ಸಹಿಸಿಕೊಳ್ಳಬೇಕು? ಪ್ರತಿಭಟನೆಗಳೆಂಬುದು ನಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದಕ್ಕೆ ಇರುವ ಮಾರ್ಗಗಳೇ ಹೊರತು ಹಲ್ಲೆಗೆ, ತೋಚಿದಂತೆ ನಡಕೊಳ್ಳುವುದಕ್ಕೆ ಇರುವ ಪರವಾನಿಗೆ ಅಲ್ಲವಲ್ಲ. ಇವತ್ತು ಈ ಪ್ರತಿಭಟನೆಗಳನ್ನು ಎತ್ತಿಕೊಂಡು ಪಕ್ಕಾ ಕೋಮುವಾದಿಗಳೂ  ಮುಸ್ಲಿಮರನ್ನು ಹೀಗಳೆಯುತ್ತಿದ್ದಾರಲ್ಲ, ಅಸ್ಸಾಮ್ ಮತ್ತು ಮ್ಯಾನ್ಮಾರ್‍ನ ಬದಲು ಇವೇ ಚರ್ಚೆಯಾಗುವಂತೆ ನೋಡಿಕೊಳ್ಳುತ್ತಿದ್ದಾರಲ್ಲ, ಇದಕ್ಕೆ ಯಾರು ಹೊಣೆ?
      ಮುಸ್ಲಿಮರಿಂದ ಸಣ್ಣ ಪ್ರಮಾದವಾದರೂ ಅದನ್ನು ಧರ್ಮದ ತಪ್ಪೆಂಬಂತೆ ಮತ್ತು ಇಡೀ ಮುಸ್ಲಿಮ್ ಸಮುದಾಯವೇ ಅದಕ್ಕೆ ಹೊಣೆಯೆಂಬಂತೆ ಬಿಂಬಿಸುವ ಶ್ರಮ ಇವತ್ತು ಈ ದೇಶದಲ್ಲಿ  ಒಂದು ವರ್ಗದಿಂದ ನಡೆಯುತ್ತಲೇ ಇದೆ. ಇಂಥ ಹೊತ್ತಲ್ಲಿ ಮುಸ್ಲಿಮರ ಆಲೋಚನೆ, ಮಾತು, ವರ್ತನೆಗಳೆಲ್ಲ ಅತ್ಯಂತ ಪಕ್ವ ರೂಪದಲ್ಲಿರಬೇಕು. ಜಗತ್ತಿನಲ್ಲಿರುವ ಎಲ್ಲರೂ ಒಂದೇ ತಂದೆ ತಾಯಿಯ ಮಕ್ಕಳು ಮತ್ತು ಪರಸ್ಪರ ಸಹೋದರರು (ಪವಿತ್ರ ಕುರ್‍ಆನ್: 49:13) ಎಂದು ನಂಬುವ ಮುಸ್ಲಿಮರ ಪಾಲಿಗೆ ಪಾಕಿಸ್ತಾನದಲ್ಲಿ ಅನ್ಯಾಯಕ್ಕೆ ಒಳಗಾಗುವ ಹಿಂದೂವಿನ ನೋವೂ ಅವರದೇ ನೋವಾಗಬೇಕು. ಮ್ಯಾನ್ಮಾರ್‍ನ ಮುಸ್ಲಿಮರ ನೋವು ಅವರದೇ ನೋವು. ಇತಿಯೋಪಿಯಾದ ಬಡ ಮನುಷ್ಯರ ಹಸಿವೂ ತಮ್ಮದೇ ಹಸಿವಾಗಬೇಕು.. ಆದ್ದರಿಂದ ಮ್ಯಾನ್ಮಾರ್ ಎಂದಲ್ಲ ಜಗತ್ತಿನ ಎಲ್ಲೇ ಆಗಲಿ ಮನುಷ್ಯರ ಮೇಲೆ ಅನ್ಯಾಯ ಆಗುತ್ತಿದ್ದರೆ ಅದರ ಬಗ್ಗೆ ಜನಜಾಗೃತಿ ಮೂಡಿಸುವ, ಪ್ರತಿಭಟಿಸುವ ಹಕ್ಕು ಯಾವಾಗಲೂ ಇರುತ್ತದೆ. ಟಿಬೆಟ್‍ನಲ್ಲಿ ಚೀನಾದ ದೌರ್ಜನ್ಯವನ್ನು ಖಂಡಿಸಿ ಭಾರತದಲ್ಲಿರುವ ಟಿಬೆಟಿಯನ್ನರು ಪ್ರತಿಭಟಿಸುವುದು, ತಮಿಳರ ಮೇಲೆ ಲಂಕಾ ಸರಕಾರ ಎಸಗುತ್ತಿರುವ ಕ್ರೌರ್ಯವನ್ನು ಭಾರತದಲ್ಲಿರುವ ತಮಿಳರು ಖಂಡಿಸುವುದೆಲ್ಲ ಈ ಮನುಷ್ಯ ಪ್ರೇಮದ ಆಧಾರದಲ್ಲೇ. ಒಂದು ವೇಳೆ ಈ ಪ್ರಜ್ಞೆ ಸತ್ತು ಹೋದರೆ ಮತ್ತು ಅನ್ಯಾಯವನ್ನೂ ಮುಸ್ಲಿಮ್, ಹಿಂದೂ ಎಂದು ವರ್ಗೀಕರಿಸಿ ಬಿಟ್ಟರೆ ಮತ್ತೆ ಮನುಷ್ಯರು ಅಂತ ಗುರುತಿಸಿಕೊಳ್ಳುವುದಕ್ಕೆ ನಮಗೆ ಅರ್ಹತೆಯಾದರೂ ಏನಿದೆ? ಅನ್ಯಾಯಕ್ಕೆ ಧರ್ಮ ಇಲ್ಲ ಎಂದಾದರೆ ಅದನ್ನು ಖಂಡಿಸುವಾಗ ಧರ್ಮ ಅಡ್ಡ ಬರಬಾರದು ಅಲ್ಲವೇ? ಒಳಿತಿನ ಮತ್ತು ಮನುಷ್ಯ ಪ್ರೇಮದ ಕೆಲಸದಲ್ಲಿ ಎಲ್ಲರೊಂದಿಗೆ ಸಹಕರಿಸಿ ಎಂದು ಪವಿತ್ರ ಕುರ್‍ಆನ್ (5: 2) ಹೇಳಿರುವಾಗ, ಮುಸ್ಲಿಮರು ಅದರ ವಿರೋಧಿಯಾಗಲು ಸಾಧ್ಯವೇ? ನಿಜವಾಗಿ ಇವತ್ತು ಪ್ರತಿಭಟನೆಗಳೆಲ್ಲಾ ಹಿಂದೂ-ಮುಸ್ಲಿಮ್ ಆಗಿ ವಿಭಜನೆಗೊಂಡಿದ್ದರೆ, ಅದು ವಿಭಜಿಸಿದವರ ತಪ್ಪೇ ಹೊರತು ಧರ್ಮದ್ದಲ್ಲ. ಯಾವಾಗ ಆ ವಿಭಜನೆಯನ್ನು ಮೀರಿ ಸರ್ವರಿಗೂ ಒಂದುಗೂಡಲು ಸಾಧ್ಯವಾಗುತ್ತದೋ ಆಗ ಅಸ್ಸಾಮ್‍ಗಳು, ಗುಜರಾತ್‍ಗಳು ಖಂಡಿತ ಇಲ್ಲವಾದೀತು. ನಿಜವಾಗಿ, ಮನುಷ್ಯ ವಿರೋಧಿಗಳನ್ನು, ವಿಭಜನವಾದಿಗಳನ್ನು ಸೋಲಿಸುವುದಕ್ಕೆ ಮನುಷ್ಯ ಪ್ರೇಮಿಗಳ ಬಳಿಯಿರುವ ಆಯುಧ ಇದೊಂದೇ. ಆದ್ದರಿಂದಲೇ ಮುಂಬೈ ಮತ್ತು ಲಕ್ನೋ ಪ್ರತಿಭಟನೆಗಳ ಬಗ್ಗೆ ವಿಷಾದ ಮೂಡುವುದು.

1 comment:

  1. edhu nijavagiyoo oppuvantha mathu. ella muslimarigu, hindhugaligu navella ondhe emba bhuddhi barali.

    ReplyDelete