Wednesday, August 25, 2021

ಒಂದು ಸಂವಾದ ಮತ್ತು ಕಾಫಿರ್, ಜಿಹಾದ್ ಇತ್ಯಾದಿಗಳು




ಈ ಸಂವಾದವನ್ನು ಓದಿ

‘ಸನಾತನ ಧರ್ಮದ ಕೃತಿಗಳನ್ನು ಕೊಳ್ಳಲು ಹೆಸರು ಕೇಳಿದ್ದೀರಿ. ಋಗ್ವೇದ ಪುಸ್ತಕದ ಹೆಸರೇ ಋಗ್ವೇದವೆಂದು. ಇನ್ನು ಉಪನಿಷತ್ತುಗಳು  ನೂರಾ ಎಂಟು ಇವೆ. ಅವುಗಳಲ್ಲಿ ಹದಿಮೂರು ಉಪನಿಷತ್ತುಗಳು ದಶೋಪನಿಷತ್ ಎಂದು ಪ್ರಸಿದ್ಧವಾಗಿದೆ. ಇವು ಮುಖ್ಯ ಉಪ ನಿಷತ್ತುಗಳು. ಈಶಾವ್ಯಾಸ, ಮಾಂಡೂಕ್ಯ, ಮುಂಡಕ, ಬೃಹದಾರಣ್ಯಕ, ಕೇನ, ಕಠ, ತೃತ್ತರೀಯ, ಐತ್ತರೇಯ, ಛಾಂದೋಗ್ಯ, ಪ್ರಶ್ನ... ಇಷ್ಟನ್ನು ಓದಿ. ರಾಮಕೃಷ್ಣಾಶ್ರಮದ ಪ್ರಕಟಣೆಗಳು ಚೆನ್ನಾಗಿವೆ. ಇನ್ನು,

ಹಿಂದುತ್ವದ ಕೆಲವು ಸಂಘಟನೆಗಳೂ ಪ್ರಕಟಿಸಿವೆ. ಆದರೆ ನಾನು ಅದನ್ನು ಶಿಫಾರಸು ಮಾಡುವುದಿಲ್ಲ. ಅಲ್ಲಿ ವಿವರಣೆಯಲ್ಲಿ ಅವರ  ರಾಜಕೀಯ ನಿಲುವುಗಳ ಛಾಯೆ ಬಂದು ಬಿಡುತ್ತದೆ. ಆದರೆ, ರಾಮಕೃಷ್ಣಾಶ್ರಮದ ಪ್ರಕಟಣೆಗಳು ವಾಸ್ತವಿಕವಾಗಿ ಏನಾಗಿವೆಯೋ ಅವೇ  ಇವೆ. ಸನಾತನ ಧರ್ಮದ ತಾತ್ವಿಕತೆಯು ಅರಿವಿಗೆ ಬರಬೇಕಾದರೆ ಇದನ್ನು ಓದಬೇಕು. ಹಿಂದೂ   ಗಳನ್ನು ಅಟ್ಯಾಕ್ ಮಾಡಲು  ಮೆಟೀರಿಯಲ್ ಬೇಕು ಎಂಬ ಉz್ದÉÃಶದಿಂದ ಓದುವುದಿದ್ದರೆ ಇವು ಆಗುವುದಿಲ್ಲ. ಆಗ ನೀವು ಮನುಸ್ಮÈತಿಯ ಕೆಲವು ಭಾಗಗಳನ್ನು ಓದಿ  ಮತ್ತು ಪುರಾಣ ಗಳನ್ನು ಓದಿ. ಅದರಲ್ಲಿ ಹಿಂದೂಗಳನ್ನು ಟೀಕಿಸುವುದಕ್ಕೆ ಬೇಕಾದಷ್ಟು ವಿಷಯ ಸಿಗುತ್ತದೆ.

ನೀವು ಋಗ್ವೇದವನ್ನು ಓದುವುದಾದರೆ, ವೇದದ ನಾಲ್ಕು ಭಾಗಗಳ ಅರಿವಿರಬೇಕು. ಮೊದಲ ಭಾಗ ಸಂಹಿತೆ- ದೇವರ ಸ್ತುತಿ. ಎರಡ ನೆಯ ಭಾಗ ಬ್ರಾಹ್ಮಣವು- ಕ್ರಿಯಾವಿಧಿ. ಮೂರನೆಯ ಭಾಗ- ಅರಣ್ಯಕವು ಪ್ರಕೃತಿಯ ನಿಗೂಢಗಳ ವಿವರ ಮತ್ತು ಕ್ರಿಯೆಯು ಪ್ರಕೃತಿಯ  ಮೇಲೆ ಬೀರುವ ಪರಿಣಾಮಗಳ ವಿವರಗಳನ್ನು ಒಳಗೊಂಡಿದೆ. ಹಾಗಂತ,

ಓದುವಾಗ ವೇದ-ಅಭ್ಯಾಸದ ಸೂತ್ರಗಳ ಅರಿವಿದ್ದರೆ ಅನುಕೂಲತೆ ಜಾಸ್ತಿ. ಉದಾಹರಣೆಗೆ, ಬಾದರಾಯಣರ ಸೂತ್ರವಿದೆ. ನಾರಾಯಣ  ಗುರುಗಳ ಸೂತ್ರವಿದೆ. ಗೌಡಪಾದರ ಕಾರಿಕೆಗಳಿವೆ. ಇವುಗಳ ಅರಿವಿಲ್ಲದೇ ಓದಿದರೆ ಮೆಟಾಫರ್‌ಗಳು ಅರ್ಥವಾಗು ವುದಿಲ್ಲ.  ಉದಾಹರಣೆಗೆ- ವಿಶ್ವಸೃಷ್ಟಿಯ ಬಗೆ ಋಗ್ವೇದವು, ‘ಸಭೂಮಿನ್ ವಿಶ್ವತೋವೃತ್ವ ಅತ್ಯತ್ತಿಷ್ಟ ದಶಾಂಗುಲಂ...’ ಎಂದಾಗ ಏನೆಂದು ಅರ್ಥ  ಆಗುವುದಿಲ್ಲ. ಆದರೆ, ವಿಶ್ವವು ಒಂದು ಯಜ್ಞಕುಂಡದ ಮಾದರಿಯಲ್ಲಿದ್ದರೆ ಆಗ ವಿಶ್ವಸೃಷ್ಟಿ ಹೀಗೀಗೆ ಆಗಿದೆ ಎಂಬುದು ಅದರ ವಿವರ  ಎಂದು ಗೊತ್ತಾಗುತ್ತದೆ. ಸೂತ್ರಗಳು ಗೊತ್ತಿದ್ದಾಗ ಇದು ಸುಲಭವಾಗಿ ಅರ್ಥವಾಗುತ್ತದೆ. ಸಾಧ್ಯ ಇದ್ದರೆ ಓದುವ ಮೊದಲು ಒಂದೆರಡು  ದಿನವಾದರೂ ಬಲ್ಲವರ ಮಾರ್ಗದರ್ಶನ ಪಡೆದು ನಂತರ ಓದುವುದು ಒಳಿತು...’ ಅಷ್ಟಕ್ಕೂ,

ಈ ಮೇಲಿನ ಬರಹ ಶಿಕ್ಷಕ ಮತ್ತು ಸಾಹಿತಿ ಅರವಿಂದ ಚೊಕ್ಕಾಡಿಯವರದು. ಫೇಸ್‌ಬುಕ್‌ನಲ್ಲಿ ಅವರು ಈ ಬರಹವನ್ನು ಹಂಚಿಕೊಂಡಿದ್ದರು. ಇದಕ್ಕೆ ಮೂಲ  ಕಾರಣ ಶಮೀರಾ ಜಹಾನ್ ಅವರ ಪ್ರಶ್ನೆ. ಸನಾತನ ಧರ್ಮದ ಕೃತಿಗಳನ್ನು ಎಲ್ಲಿಂದ ಪಡೆಯಬಹುದು ಎಂಬ ಅವರ ಪ್ರಶ್ನೆಗೆ  ಉತ್ತರವಾಗಿ ಚೊಕ್ಕಾಡಿಯವರು ಈ ಅಭಿಪ್ರಾಯವನ್ನು ಹಂಚಿಕೊಂಡರು. ಅಷ್ಟೇ ಅಲ್ಲ,

ಚೊಕ್ಕಾಡಿಯವರು ಈ ಅಭಿಪ್ರಾಯವನ್ನು ಹಂಚಿಕೊಳ್ಳುವಾಗ ಅಫಘಾನಿಸ್ತಾನ ನಿಗಿನಿಗಿ ಕುದಿಯುತ್ತಿತ್ತು. ಅಮೇರಿಕನ್ ಪಡೆಗಳು  ಅದಾಗಲೇ ಅಫಘಾನ್‌ಗೆ ಗುಡ್‌ಬೈ ಹೇಳಿತ್ತು ಮತ್ತು ಅಫಘಾನ್ ಸೇನೆ ಮತ್ತು ತಾಲಿಬಾನ್ ನಡುವೆ ತೀವ್ರ ಕಾಳಗ ನಡೆಯುತ್ತಿತ್ತು. ಪು ಲಿಟ್ಝರ್ ಪ್ರಶಸ್ತಿ ವಿಜೇತ ಭಾರತದ ಖ್ಯಾತ ಫೋಟೋ ಜರ್ನಲಿಸ್ಟ್ ದಾನಿಶ್ ಸಿದ್ದೀಕಿ ತಾಲಿಬಾನ್ ಗುಂಡೇಟಿಗೆ ಬಲಿಯಾದದ್ದು ಈ  ಬರಹದ ಮೂರ್ನಾಲ್ಕು ದಿನಗಳ ಬಳಿಕ. ಅಂದಹಾಗೆ, ಈ ಸಂಗತಿಯನ್ನು ಇಲ್ಲಿ ಉಲ್ಲೇಖಿಸುವುದಕ್ಕೂ ಒಂದು ಕಾರಣ ಇದೆ.

ದಶಕಗಳ ಬಳಿಕ ತಾಲಿಬಾನ್ ಅಫಘಾನಿಸ್ತಾನದಲ್ಲಿ ಮತ್ತೆ ಮುನ್ನೆಲೆಗೆ ಬರುವುದರೊಂದಿಗೆ ಮುಸ್ಲಿಮರತ್ತ ಪ್ರಶ್ನೆಗಳ ಕೂರುಂಬು ಗಳನ್ನು  ಎಸೆಯುವ ಪ್ರಕ್ರಿಯೆಯೂ ಪ್ರಾರಂಭವಾಗಿದೆ. ತಾಲಿಬಾನ್ ಬಗ್ಗೆ ನೀವು ಏನು ಹೇಳುತ್ತೀರಿ, ಖಂಡಿಸುತ್ತೀರಾ? ಅವರು ಮಹಿಳಾ ಶಿಕ್ಷಣದ  ವಿರೋಧಿ, ಪ್ರಜಾತಂತ್ರದ ವಿರೋಧಿ, ಜಿಹಾದಿ ಗಳು... ಎಂದೆಲ್ಲಾ ಪಾಠ ಮಾಡುತ್ತಿದೆ. ತಮಾಷೆ ಏನೆಂದರೆ,
ತಾಲಿಬಾನ್ ಎಂಬ ನಾಲ್ಕಕ್ಷರಕ್ಕೆ ಹೋಲಿಸಿದರೆ ಸಿದ್ದೀಖಿ ಎಂಬ ಮೂರಕ್ಷರ ಭಾರತೀಯರ ಪಾಲಿಗೆ ಬಹುತೇಕ ಅಪರಿಚಿತ.  ಭಾರತೀಯರ ನಡುವೆಯಿದ್ದೂ ಪುಲಿಟ್ಝರ್ ಪ್ರಶಸ್ತಿ ಪಡೆದೂ ಮತ್ತು ಅಸಂಖ್ಯ ಮನಮುಟ್ಟುವ ಫೋಟೋ ಕ್ಲಿಕ್ಕಿಸಿಯೂ ಸಿದ್ದೀಖಿ  ಭಾರತೀಯರಿಗೆ ಯಾಕೆ ಅಪರಿಚಿತ ಎಂದರೆ, ಅವರು ತಾಲಿಬಾನ್ ಅಲ್ಲ. ತಾಲಿಬಾನ್ ಈ ದೇಶದಲ್ಲಿ ಚಿರಪರಿಚಿತವಾಗಿರುವುದೂ ಅದರ  ಅನಾಹುತಕಾರಿ ಕೃತ್ಯಗಳಿಗಾಗಿ ಮಾತ್ರ ಅಲ್ಲ, ಅದನ್ನು ಎತ್ತಿಕೊಂಡು ಈ ದೇಶದ ಮುಸ್ಲಿಮರನ್ನು ಮತ್ತು ಕುರ್‌ಆನನ್ನು ತಿವಿಯುವುದಕ್ಕೆ  ಬಳಸಿಕೊಂಡ ಕಾರಣಕ್ಕಾಗಿ. ತಾಲಿಬಾನ್  ಎಂಬುದು ಈ ಹಿಂದೆ ಈ ದೇಶದ ಒಂದು ವರ್ಗದ ಗಾಳದ ತುದಿಯ ಎರೆಹುಳವಾಗಿತ್ತು. ಈ  ಎರೆಹುಳ ಈ ದೇಶದ್ದಲ್ಲ ಎಂಬುದು ಗಾಳಕ್ಕೆ ಸಿಕ್ಕಿಸಿಕೊಂಡವರಿಗೆ ಚೆನ್ನಾಗಿ ಗೊತ್ತಿತ್ತು.  ಅವರ ವೇಷ ಭೂಷಣ, ಭಾಷೆ, ವಿಚಾರಧಾರೆ,  ಕೋವಿ, ಹೋರಾಟದ ಹಿನ್ನೆಲೆ... ಇತ್ಯಾದಿಗಳನ್ನು ಕಣ್ಣಾರೆ ಕಂಡಿರದ ಮತ್ತು ಅವರೊಂದಿಗೆ ಮಾತಾಡಿರದ ಮಂದಿ ಅವರು ಪವಿತ್ರ  ಕುರ್‌ಆನಿನ ಯಥಾವತ್ ಪ್ರಾಡಕ್ಟು  ಎಂದು ಈ ದೇಶದಲ್ಲಿ ಗಾಳದ ತುದಿಗೆ ಸಿಲುಕಿಸಿ ಪರಿಚರಿಸತೊಡಗಿದರು. ಅವರು ಏನೆಲ್ಲಾ  ಮಾಡಿದರೋ ಅವನ್ನೆಲ್ಲ ಕುರ್‌ಆನ್‌ಗೆ ಜೋಡಿಸಿದರು. ಇಲ್ಲಿಯ ಮುಸ್ಲಿಮರ ಪ್ರತಿಕ್ರಿಯೆಯನ್ನು ಬಯಸಿದರು. 2001ರ ಅವಳಿ ಗೋಪುರದ ಘಟನೆಯ ಬಳಿಕ ತಲೆಗೊಂದು ಪೇಟ, ಜುಬ್ಬಾ-ಪೈಜಾಮ ಮತ್ತು ಮೈಯಿಡೀ ಬುರ್ಖಾ ಧರಿಸಿದವರ ಚಿತ್ರಗಳು ನಿಧಾನಕ್ಕೆ ಈ  ದೇಶದ ಟಿ.ವಿ. ಮತ್ತು ಮುದ್ರಣ ಮಾಧ್ಯಮಗಳಿಂದ ನಿಧಾನಕ್ಕೆ ಕಣ್ಮರೆಯಾದರೂ ಅವರನ್ನು ಗಾಳಕ್ಕೆ ಸಿಲುಕಿಸಿ ಸುತ್ತಾಡಿದವರು ಎತ್ತಿದ ಪ್ರಶ್ನೆಗಳು  ಆಗಾಗ ಮುನ್ನೆಲೆಗೆ ಬರುತ್ತಲೇ ಇದ್ದುವು. ಕುರ್‌ಆನ್ ಹಿಂದೂಗಳನ್ನು ಕಾಫಿರ್ ಅನ್ನುತ್ತದೆ, ಮುಸ್ಲಿಮೇತರರನ್ನು ಕಂಡಕಂಡಲ್ಲಿ ವಧಿಸಲು  ಕರೆ ಕೊಡುತ್ತದೆ, ಮುಸ್ಲಿಮೇತರರ ವಿರುದ್ಧ ಜಿಹಾದ್ ಘೋಷಿಸುತ್ತದೆ, ಮತಾಂತರಕ್ಕೆ ಪ್ರೇರಣೆ ಕೊಡುತ್ತದೆ.. ಇತ್ಯಾದಿಗಳು ತಾಲಿಬಾನ್  ಕಣ್ಮರೆಯಾದ ಬಳಿಕವೂ ಸಮಾಜದಲ್ಲಿ ಉಳಿದುಕೊಂಡಿವೆ. ಇದೀಗ ತಾಲಿಬಾನ್ ಮತ್ತೆ ರಂಗಪ್ರವೇಶಿಸಿರುವುದರಿಂದ ಮುಂದಿನ ದಿನಗಳಲ್ಲಿ  ಭುಜದಲ್ಲಿ ಕೋವಿ ಹಿಡಿದ, ಜುಬ್ಬಾ-ಕುರ್ತಾ, ಪೇಟಧಾರಿ ವ್ಯಕ್ತಿಗಳ ಚಿತ್ರ ಮಾಧ್ಯಮಗಳಲ್ಲಿ ತುಂಬಿ ತುಳುಕಬಹುದು ಮತ್ತು ಇವರ ಬಗ್ಗೆ  ನೀವೇನು ಹೇಳುತ್ತೀರಿ ಎಂಬ ಪ್ರಶ್ನೆಯನ್ನು ಮುಸ್ಲಿಮರತ್ತ ಎಸೆಯಬಹುದು. ಅಲ್ಲದೇ, ಪವಿತ್ರ ಕುರ್‌ಆನಿನ 2:191, 4:56, 89, 101, 5:51,  8:65, 9:5 ಮತ್ತು ಇಂತಹ ಇನ್ನಿತರ ವಚನಗಳನ್ನು ತೇಲಿಬಿಟ್ಟು ಮುಸ್ಲಿಮರ ಕ್ರೂರತನಕ್ಕೆ ಪುರಾವೆಗಳಾಗಿ ಮಂಡಿಸಬಹುದು.  ಆದ್ದರಿಂದಲೇ,
ಚೊಕ್ಕಾಡಿಯವರ ಅಭಿಪ್ರಾಯ ಮುಖ್ಯವಾಗುತ್ತದೆ.

‘ಸನಾತನ ಧರ್ಮದ ಕೃತಿಗಳನ್ನು ಓದುವಾಗ ವೇದ ಅಭ್ಯಾಸದ ಸೂಕ್ತಗಳ ಅರಿವಿರಬೇಕು ಎಂಬುದಾಗಿ ಅವರು ಹೇಳಿದ್ದಾರೆ. ಇವುಗಳ  ಅರಿವಿಲ್ಲದೆ ಓದಿದರೆ ಮೆಟಾಫರ್‌ಗಳು ಅರ್ಥವಾಗಲಾರದು. ಆದ್ದರಿಂದ, ಸಾಧ್ಯವಾದರೆ ಓದುವ ಮೊದಲು ಒಂದೆರಡು ದಿನವಾದರೂ  ಬಲ್ಲವರ ಮಾರ್ಗದರ್ಶನ ಪಡೆಯುವುದು ಉತ್ತಮ’ ಎಂದೂ ಹೇಳಿದ್ದಾರೆ. ನಿಜವಾಗಿ,

ಸನಾತನ ಧರ್ಮದ ಕೃತಿಗಳನ್ನು ಅಧ್ಯಯನ ನಡೆಸುವಾಗ ಮಾತ್ರ ಈ ಎಚ್ಚರಿಕೆ ಇರಬೇಕಾದುದಲ್ಲ. ಯಾವುದೇ ಧರ್ಮದ ಗ್ರಂಥಗಳ  ಅಧ್ಯಯನ ನಡೆಸುವಾಗಲೂ ಈ ಎಚ್ಚರಿಕೆ ಸದಾ ಜೊತೆಗಿರಬೇಕು. ಒಂದು ಉದಾಹರಣೆ ಕೊಡುತ್ತೇನೆ- ಪವಿತ್ರ ಕುರ್‌ಆನಿನಲ್ಲಿ ಕಾಫಿರ್,  ಕುಫ್ರ್ ಮತ್ತು ಶಿರ್ಕ್ ಎಂಬ ಪದಗಳು ಅನೇಕ ಕಡೆ ಪ್ರಯೋಗವಾಗಿವೆ. ಕಾಫಿರರನ್ನು ಕಂಡಕಂಡಲ್ಲಿ ವಧಿಸಿರಿ.. ಎಂಬುದು ಕೂಡಾ  ಇದರಲ್ಲಿ ಒಂದು. ಅಂದಹಾಗೆ, ಕುಫ್ರ್ ಪದದ ಅರ್ಥ ಏಕಪ್ರಕಾರವಲ್ಲ. ಸಂದರ್ಭಾನುಸಾರ ಅದು ಬೇರೆ ಬೇರೆ ಅರ್ಥದಲ್ಲಿ ಕುರ್‌ಆನಿನಲ್ಲಿ  ಬಳಕೆಯಾಗಿದೆ. ನಿರಾಕರಣೆ, ಆಜ್ನೊಲ್ಲಂಘನೆ, ಕೃತಘ್ನತೆ, ಅವಗಣನೆ, ಸತ್ಯವನ್ನು ಮರೆಮಾಚುವುದು, ಅಧರ್ಮ ಎಂಬೆಲ್ಲಾ ಅರ್ಥಗಳಲ್ಲಿ  ಪವಿತ್ರ ಕುರ್‌ಆನ್ ಈ ಪದವನ್ನು ಪ್ರಯೋಗಿಸಿದೆ. ಪ್ರವಾದಿ ಮುಹಮ್ಮದರ(ಸ) ಪ್ರಸಿದ್ಧ ಮಾತೊಂದಿದೆ,

ಉದ್ದೇಶಪೂರ್ವಕವಾಗಿ ನಮಾಜ್  ತೊರೆಯುವ ಮುಸ್ಲಿಮನು ಕುಫ್ರ್ ಎಸಗಿದನು ಅಥವಾ ಕಾಫಿರ್ ಆದನು.
ಪವಿತ್ರ ಕುರ್‌ಆನಿನಲ್ಲಿ ಒಂದು ವಚನ ಹೀಗಿದೆ,

‘ಅಲ್ಲಾಹನು ಅವತೀರ್ಣಗೊಳಿಸಿದ ಕಾನೂನಿನ ಪ್ರಕಾರ ತೀರ್ಮಾನ ಮಾಡದವರೇ ಕಾಫಿರರು’ (5: 44).

ಈ ಮೇಲಿನ ಎರಡೂ ವಚನಗಳಲ್ಲಿ ಕಾಫಿರ್ ಎಂದು ಕರೆದಿರುವುದು ಮುಸ್ಲಿಮರನ್ನು. ಅಲ್ಲದೇ, ರೈತರನ್ನು ಕೂಡ ಪವಿತ್ರ ಕುರ್‌ಆನ್  ಕಾಫಿರ್ (57: 20) ಎಂದು ಕರೆದಿದೆ. ಇಲ್ಲಿ ಕಾಫಿರ್ ಎಂದರೆ ಮರೆಮಾಚುವವರು ಎಂದರ್ಥ. ರೈತರು ಬೀಜವನ್ನು ಗದ್ದೆಯಲ್ಲಿ ಬಿತ್ತುವ  ಮೂಲಕ ಬೀಜವನ್ನು ಅಡಗಿಸುತ್ತಾರೆ ಎಂಬ ಕಾವ್ಯಾತ್ಮಕ ಪದಪ್ರಯೋಗವನ್ನು ಕುರ್‌ಆನ್ ಬಳಸಿದೆ. ಇಲ್ಲಿ ಇನ್ನೊಂದು ಅಂಶವನ್ನೂ  ಹೇಳಲೇಬೇಕು.

ಕಾಫಿರ್ ಎಂಬುದು ಬೈಗುಳ ಅಲ್ಲ. ಯುದ್ಧಕ್ಕೆ ಕರೆಕೊಡುವ ಪದವೂ ಅಲ್ಲ ಅಥವಾ ಕಾಫಿರ್ ಎಂದರೆ ಹಿಂದೂಗಳು ಎಂದೂ ಅಲ್ಲ.  ಕಾಫಿರ್‌ಗೆ ನಾಸ್ತಿಕ ಎಂಬುದು ಸಂವಾದಿ ಪದ ಆಗಬಹುದೇ ಹೊರತು ಹಿಂದೂ, ಕ್ರೈಸ್ತ, ಯಹೂದಿ ಅಲ್ಲ. ಅಲ್ಲದೇ, ಪವಿತ್ರ ಕುರ್‌ಆನಿನಲ್ಲಿ  ಕಾಫಿರರ ವಿರುದ್ಧ ಯುದ್ಧ ಸಾರಿರುವುದಕ್ಕೆ ಅವರು ಕಾಫಿರರು ಅಥವಾ ಇಸ್ಲಾಮನ್ನು ಒಪ್ಪದವರು ಎಂಬುದೂ ಕಾರಣ ಆಗಿರಲಿಲ್ಲ. ಮಕ್ಕಾ  ಮತ್ತು ಮದೀನದಲ್ಲಿ ಇಸ್ಲಾಮನ್ನು ಒಪ್ಪದ ಯಹೂದಿಯರು ಮತ್ತು ಕ್ರೈಸ್ತರು ಸಾಕಷ್ಟು ಮಂದಿ ಇದ್ದರು. ಯಹೂದಿಯೋರ್ವರ  ಶವಯಾತ್ರೆ ನಡೆಯುವಾಗ ಪ್ರವಾದಿ ಮುಹಮ್ಮದ್(ಸ)ರು ಎದ್ದು ನಿಂತ ಘಟನೆ ಎಲ್ಲರಿಗೂ ಗೊತ್ತು. ಕಾಫಿರರ ವಿರುದ್ಧದ ಹೋರಾಟಕ್ಕೆ  ಧರ್ಮಾತೀತವಾದ ಕಾರಣಗಳಿವೆ. ಇಸ್ಲಾಮಿನ ವಿರುದ್ಧ ಸಂಚು, ಶತ್ರುಗಳೊಂದಿಗೆ ಸೇರಿ ಮಾಡಿರುವ ಕುತಂತ್ರ, ಬಂಡಾಯ ಪ್ರಚೋದನೆ  ಮುಂತಾದ ಅಂದಿನ ಕಾಲದ ಕಾರಣಗಳ ಹಿನ್ನೆಲೆಯ ಆಧಾರದಲ್ಲೇ  ಇವನ್ನೆಲ್ಲಾ  ಪರಿಶೀಲಿಸಬೇಕು. ಇಸ್ಲಾಮಿನ ಕಡ್ಡಾಯ ಕರ್ಮವಾದ  ಝಕಾತ್ (ಕಡ್ಡಾಯ ದಾನ)ನ್ನು ನೀಡಲು ಒಪ್ಪದ ಮುಸ್ಲಿಮರ ವಿರುದ್ಧವೇ ಪ್ರಥಮ ಖಲೀಫರಾದ ಅಬೂಬಕರ್‌ರು ಯುದ್ಧ  ಘೋಷಿಸಿದರು ಎಂಬುದು ಇಲ್ಲಿ ಗಮನಾರ್ಹ. ಅಂದಹಾಗೆ,

ತಾಲಿಬಾನನ್ನು ಎರೆಹುಳದಂತೆ ಗಾಳಕ್ಕೆ ಸಿಲುಕಿಸಿ ಪ್ರದರ್ಶಿಸುವವರ ಮುಖ್ಯ ಸಮಸ್ಯೆಯೇನೆಂದರೆ, ಉದ್ದೇಶ ಶುದ್ಧಿಯದ್ದು. ಮುಸ್ಲಿಮರ  ಮೇಲೆ ಮುಗಿ ಬೀಳಬೇಕು ಮತ್ತು ಅವರನ್ನು ಹಿಂದೂ ವಿರೋಧಿಗಳಾಗಿ ಬಿಂಬಿಸಬೇಕು ಎಂಬುದೇ ಮುಖ್ಯ ವಾದಾಗ, ಪವಿತ್ರ ಕುರ್‌ಆ ನ್ ವಚನಗಳನ್ನು ಬಾಣಗಳಾಗಿ ಪರಿವರ್ತಿಸಿಕೊಳ್ಳುವುದಕ್ಕೇ ಅವರು ಆದ್ಯತೆ ನೀಡಬೇಕಾಗುತ್ತದೆ. ಈ ವಚನಗಳು  ಬಾಣಗಳಂತಾಗಬೇಕಾದರೆ ಆ ವಚನಗಳ ಹಿಂದು ಮುಂದನ್ನು ಮತ್ತು ಅದರ ಹಿನ್ನೆಲೆಯ ಇತಿಹಾಸವನ್ನು ಕತ್ತರಿಸಿ ಬರೇ ಶಬ್ದಾರ್ಥವನ್ನೇ  ಎತ್ತಿ ಹೇಳಬೇಕಾಗುತ್ತದೆ. ಪವಿತ್ರ ಕುರ್‌ಆನನ್ನು ಅರ್ಥ ಮಾಡುವುದಕ್ಕೆ ಅನುಸರಿಸಲೇಬೇಕಾದ ವಿಧಾನವನ್ನು ಅನುಸರಿಸದೇ ಎರ‍್ರಾಬರ‍್ರಿ  ಅರ್ಥಗಳನ್ನು ಮತ್ತು ವ್ಯಾಖ್ಯಾನಗಳನ್ನು ನೀಡಬೇಕಾಗುತ್ತದೆ. ಅದನ್ನೇ ಅವರೆಲ್ಲ ಮಾಡುತ್ತಿದ್ದಾರೆ. ನಿಜವಾಗಿ,

ಯಾವುದೇ ಧಾರ್ಮಿಕ ಗ್ರಂಥದ ವಚನಗಳನ್ನು ಬರೇ ಶಬ್ದಾರ್ಥದಲ್ಲೇ Ã ಹಿಡಿದಿಡಲು ಸಾಧ್ಯವಿಲ್ಲ. ಅದಕ್ಕೆ ಹಿನ್ನೆಲೆ-ಮುನ್ನೆಲೆ ಇರುತ್ತದೆ.  ಪ್ರವಾದಿ ಮುಹಮ್ಮದರನ್ನು(ಸ) ಹೊರಗಿಟ್ಟು ಪವಿತ್ರ ಕುರ್‌ಆನನ್ನು ಅರ್ಥೈಸಲು ಸಾಧ್ಯವೇ ಇಲ್ಲ. ಅವರೇ ಅದರ ವ್ಯಾಖ್ಯಾನ. ಅರವಿಂದ  ಚೊಕ್ಕಾಡಿಯವರ ಅಭಿಪ್ರಾಯದಲ್ಲಿ ವ್ಯಕ್ತವಾಗುವುದೂ ಇದುವೇ. ಅಂದಹಾಗೆ,

ಸಿದ್ದೀಖಿಗೆ ಈ ದೇಶದ ಮುಸ್ಲಿಮರು ಸಂತಾಪ ಸೂಚಿಸಿದ್ದಾರೆಯೇ ಹೊರತು ಗುಂಡಿಕ್ಕಿದ ತಾಲಿಬಾನ್‌ಗಲ್ಲ. ತಾಲಿಬಾನ್‌ನ ಕೋವಿಯನ್ನು  ಇಸ್ಲಾಮಿನ ಪವಿತ್ರ ಆಯುಧ ಎಂದು ಭಾರತೀಯ ಮುಸ್ಲಿಮರು ಭಾವಿಸಿರುತ್ತಿದ್ದರೆ ಕೋವಿಗೆ ಗೌರವ ಸಲ್ಲಬೇಕಿತ್ತು, ಸಿದ್ದೀಕಿಗಲ್ಲ..

No comments:

Post a Comment