Thursday, August 11, 2016

ಯುನಿಫಾರ್ಮ್ ಸಿವಿಲ್ ಕೋಡ್ ಅಂದರೆ ಎಲ್ಲರಿಗೂ ಒಂದೇ ಕಾನೂನು ಎಂದರ್ಥವೇ?

         ‘ಒಂದು ದೇಶ ಒಂದೇ ಕಾನೂನು..’ ಎಂಬ ಪರಿಕಲ್ಪನೆಗೂ ಸಂವಿಧಾನದ ನಿರ್ದೇಶಕ ತತ್ವಗಳಲ್ಲಿ (Directive Principle of state Policy) ಹೇಳಲಾಗಿರುವ ಸಮಾನ ನಾಗರಿಕ ಸಂಹಿತೆಗೂ (Uniform civil code) ನಡುವೆ ಇರುವ ಸಂಬಂಧ ಏನು? ಇವೆರಡೂ ಒಂದೆಯೇ ಅಥವಾ ಬೇರೆ ಬೇರೆಯೇ? ಸಂವಿಧಾನದ ನಿರ್ದೇಶಕ ತತ್ವಗಳಲ್ಲಿ ಸ್ಪಷ್ಟವಾಗಿ ‘ಯೂನಿಫಾರ್ಮ್’ ಎಂದು ಎತ್ತಿ ಹೇಳಲಾಗಿದೆಯೇ ಹೊರತು ಈಗ ಹೇಳಲಾಗುತ್ತಿರುವಂತೆ ಕಾಮನ್ ಸಿವಿಲ್ ಕೋಡ್ ಎಂದು ಹೇಳಲಾಗಿಲ್ಲ. ಯೂನಿಫಾರ್ಮ್ ಎಂಬ ಪದ ಧ್ವನಿಸುವ ಸಮಾನ ಎಂಬ ಪರಿಕಲ್ಪನೆಗೂ ಈಗ ದೇಶದಲ್ಲಿ ಚರ್ಚಿಸಲಾಗುತ್ತಿರುವ ಎಲ್ಲರಿಗೂ ಒಂದೇ ಕಾನೂನು ಎಂಬ ಆಗ್ರಹ ಧ್ವನಿಸುವ ಅರ್ಥಕ್ಕೂ ವ್ಯತ್ಯಾಸ ಇಲ್ಲವೇ? ಯೂನಿಫಾರ್ಮ್ ಎಂಬುದು ಈ ದೇಶದ ಪಾಲಿಗೆ ಅತ್ಯಂತ ಪರಿಚಿತ ಪದ - ಶಾಲೆ, ಪೊಲೀಸ್ ಇಲಾಖೆ, ಸೇನೆ, ಕಂಪೆನಿಗಳು.. ಹೀಗೆ ಪ್ರತಿಯೊಂದರಲ್ಲೂ ‘ಯೂನಿಫಾರ್ಮ್’ ವ್ಯವಸ್ಥೆ ಇದೆ. ಸಾಮಾನ್ಯವಾಗಿ ಸಮವಸ್ತ್ರಕ್ಕೆ ಸಂಬಂಧಿಸಿ ಹೇಳುವುದಾದರೆ, ಎಲ್.ಕೆ.ಜಿ. ವಿದ್ಯಾರ್ಥಿಗಳ ಯೂನಿಫಾರ್ಮ್‍ನಂತೆ ಒಂದನೇ ತರಗತಿಯ ಮಕ್ಕಳ ಯೂನಿಫಾರ್ಮ್ ಇರುವುದಿಲ್ಲ. ಹಾಗೆಯೇ ಪ್ರೌಢಶಾಲೆಯ ವಿದ್ಯಾರ್ಥಿಗಳ ಯೂನಿಫಾರ್ಮ್‍ನಂತೆ ಪದವಿ ವಿದ್ಯಾರ್ಥಿಗಳ ಯೂನಿಫಾರ್ಮ್ ಇರುವುದಿಲ್ಲ. ಬಣ್ಣ-ಆಕಾರದಲ್ಲಿ ವ್ಯತ್ಯಾಸಗಳು ಇರುತ್ತವೆ. ಎಲ್.ಕೆ.ಜಿ.ಯಿಂದ ಡಿಗ್ರಿವರೆಗಿನ ವಿದ್ಯಾರ್ಥಿಗಳು ಯೂನಿಫಾರ್ಮ್ ಪದ್ಧತಿಯನ್ನು ಪಾಲಿಸಬೇಕು ಎಂದ ತಕ್ಷಣ ಅವರೆಲ್ಲ ಒಂದೇ ಬಣ್ಣದ, ಒಂದೇ ಆಕಾರದ, ಒಂದೇ ಗಾತ್ರದ ಸಮವಸ್ತ್ರವನ್ನು ಪಾಲಿಸಬೇಕಾಗುತ್ತದೆ ಎಂದು ಯಾರೂ ಅರ್ಥೈಸುವುದಿಲ್ಲ. ಪೊಲೀಸ್ ಇಲಾಖೆಗೂ ಯೂನಿಫಾರ್ಮ್ ಇದೆ. ಆದರೆ ಪೊಲೀಸ್ ಇಲಾಖೆಯ ಯೂನಿಫಾರ್ಮ್‍ನ ಬಣ್ಣ ಮತ್ತು ಆಕಾರ ಸೇನೆಯದ್ದಲ್ಲ. ಬಹುರಾಷ್ಟ್ರೀಯ ಕಂಪೆನಿಗಳ ಉದ್ಯೋಗಿಗಳಿಗೂ ಯೂನಿಫಾರ್ಮ್‍ನ ನಿಯಮ ಇದೆ. ಆದರೆ ಅದು ಸೇನೆ, ಪೊಲೀಸ್ ಇಲಾಖೆ ಅಥವಾ ಶಾಲಾ-ಕಾಲೇಜುಗಳಂಥಲ್ಲ. ಆದ್ದರಿಂದಲೇ, ಸಂವಿಧಾನದ ನಿರ್ದೇಶಕ ತತ್ವಗಳಲ್ಲಿ ಹೇಳಲಾಗಿರುವ Uniform civil code ಎಂಬುದು ನಾವು ಇವತ್ತು ಚರ್ಚಿಸುವ ಮಾದರಿಯ ನಿಯಮ ಸಂಹಿತೆಯಾಗಿದೆಯೇ ಎಂಬ ವಿಶ್ಲೇಷಣೆಗೆ ಮಹತ್ವ ಇದೆ. ಸಮಾನತೆ (Uniform) ಎಂಬುದು ಎಲ್.ಕೆ.ಜಿ. ಯಿಂದ ಕಂಪೆನಿಗಳ ವರೆಗೆ ಏಕರೂಪತೆಯನ್ನು ಜಾರಿಗೊಳಿಸುವುದರ ಹೆಸರೋ ಅಥವಾ ಇವತ್ತು ಸೇನೆ, ಪೊಲೀಸ್ ಇಲಾಖೆ, ಶಾಲೆಗಳಲ್ಲಿ ಜಾರಿಯಲ್ಲಿರುವ ಮಾದರಿಯ ಏಕರೂಪತೆಯ ಹೆಸರೋ? ವಿವಿಧ ಧರ್ಮ, ಬುಡಕಟ್ಟುಗಳಿರುವ ದೇಶವೊಂದಕ್ಕೆ ಸಮಾನ ನಾಗರಿಕ ಸಂಹಿತೆ ಬೇಕೆಂದು ಸಂವಿಧಾನ ರಚನಾಕಾರರು ಬಯಸಲು ಕಾರಣವೇನು? ಸುಮಾರು 70 ವರ್ಷಗಳ ಹಿಂದೆ ಅವರು ನಿರೀಕ್ಷಿಸಿರಬಹುದಾದ ಸಮಾನತೆಯ ಸಂಹಿತೆ ಯಾವುದು?
      ನಿಜವಾಗಿ, ಸಂವಿಧಾನ ರಚನೆಗಿಂತ ಮೊದಲೇ ಈ ದೇಶದಲ್ಲಿ ಮುಸ್ಲಿಮ್ ಪರ್ಸನಲ್ ಲಾ ಮತ್ತು ಕ್ರೈಸ್ತ ಸಿವಿಲ್ ಕೋಡ್ ಎರಡೂ ಅಸ್ತಿತ್ವದಲ್ಲಿದ್ದುವು. ಮುಸ್ಲಿಮ್ ಪರ್ಸನಲ್ ಲಾ ಅಂತೂ 1937 ರಿಂದಲೇ ಅಸ್ತಿತ್ವಕ್ಕೆ ಬಂದಿತ್ತು. ಅದಕ್ಕೂ ಒಂದು ಹಿನ್ನೆಲೆ ಇದೆ.
        ತಂದೆಯ ಆಸ್ತಿಯಲ್ಲಿ ಹಕ್ಕು ಕೊಡಬೇಕೆಂದು ವಾದಿಸಿ 1930ರಲ್ಲಿ ಪಂಜಾಬ್‍ನ ಓರ್ವ ಮುಸ್ಲಿಮ್ ಮಹಿಳೆ ಕೋರ್ಟ್ ಮೆಟ್ಟಿಲೇರಿದಳು. ಆಕೆಯ ತಂದೆ ತೀರಿಕೊಂಡ ಬಳಿಕ ಸಂಪೂರ್ಣ ಆಸ್ತಿಯನ್ನು ಆಕೆಯ ಏಕೈಕ ಸಹೋದರ ತನ್ನ ಸುಪರ್ದಿಗೆ ಪಡೆದುಕೊಂಡಿದ್ದ. ಆಗ ಈ ದೇಶದಲ್ಲಿದ್ದುದು ಬ್ರಿಟಿಷ್ ಸರಕಾರ. ಮಾತ್ರವಲ್ಲ, ಈಗಿನ ಬಾಂಗ್ಲಾ ಮತ್ತು ಪಾಕಿಸ್ತಾನಗಳು ಈ ದೇಶದ ಭಾಗವೇ ಆಗಿದ್ದುವು. ಹೀಗೆ ಒಂದು ದೊಡ್ಡ ಮುಸ್ಲಿಮ್ ಜನ ಸಂಖ್ಯೆಯ ಪ್ರತಿನಿಧಿಯೋರ್ವಳು ಕೋರ್ಟ್ ಕಟಕಟೆಯಲ್ಲಿ ನಿಂತಿರುವುದು ಮುಸ್ಲಿಮ್ ಸಮುದಾಯದಲ್ಲಿ ಕುತೂಹಲವನ್ನು ಹುಟ್ಟು ಹಾಕಿತ್ತು. ಸಮುದಾಯದೊಳಗೆ ವಿವಿಧ ಬಗೆಯ ಚರ್ಚೆಗೆ ಈ ವಿವಾದ ಕಾರಣವೂ ಆಯಿತು. ಅದೇ ವೇಳೆ ಅಂದಿನ ಬ್ರಿಟಿಷ್ ಕೋರ್ಟ್ (ಪ್ರಿ ಕೌನ್ಸಿಲ್) ಆಕೆಯ ವಾದವನ್ನು ತಿರಸ್ಕರಿಸಿತು. ತಂದೆಯ ಆಸ್ತಿಯಲ್ಲಿ ಹೆಣ್ಣಿಗೆ ಹಕ್ಕಿಲ್ಲ ಎಂದು ತೀರ್ಪು ನೀಡಿತು. ಇದನ್ನು ಆಕೆ ಪ್ರಬಲವಾಗಿ ವಿರೋಧಿಸಿದಳು. ಶರೀಅತ್ (ಕುರ್‍ಆನ್)ನಲ್ಲಿ ಹೆಣ್ಣಿಗೂ ಗಂಡಿಗೂ ಆಸ್ತಿಯಲ್ಲಿ ಹಕ್ಕು ಇರುವುದರಿಂದ ಈ ತೀರ್ಪು ಶರೀಅತ್ ವಿರೋಧಿಯಾಗಿದೆ ಎಂದು ಆಕೆ ವಾದಿಸಿದಳು. ಮುಸ್ಲಿಮ್ ವಿದ್ವಾಂಸರೂ ಬ್ರಿಟಿಷ್ ನ್ಯಾಯ ಪದ್ಧತಿಯನ್ನು ಖಂಡಿಸಿದರು. ಹೀಗೆ ಈ ಆಸ್ತಿ ಹಂಚಿಕೆ ವಿವಾದವು ಗಂಭೀರ ಸ್ವರೂಪ ಪಡೆಯುವುದನ್ನು ಮನಗಂಡ ಬ್ರಿಟಿಷರು ಈ ಕುರಿತಂತೆ ಕಾನೂನು ರಚನೆಯಲ್ಲಿ ತೊಡಗಿದರು. 1937ರಲ್ಲಿ ಮುಸ್ಲಿಮ್ ಪರ್ಸನಲ್ ಲಾ (ಶರೀಅತ್) ಎಂಬ ಹೆಸರಿನಲ್ಲಿ ಕಾನೂನೊಂದನ್ನು ಜಾರಿಗೊಳಿಸಿದರು. ಜೊತೆಗೇ ಆವರಣದಲ್ಲಿ ಶರೀಅತ್ ಎಂದೂ ಸೇರಿಸಿದರು. ಈ ಕಾನೂನು ಮುಖ್ಯವಾಗಿ, 1. ಉತ್ತರಾಧಿಕಾರ, 2. ವಿವಾಹ, 3. ವಿವಾಹ ವಿಚ್ಛೇದನ, 4. ದತ್ತು ಸ್ವೀಕಾರ, 5. ನಿರ್ವಹಣಾ ವೆಚ್ಚ, 6. ಉಡುಗೊರೆ ಮತ್ತು 7. ವಕ್ಫ್ ಹೀಗೆ 7 ವಿಷಯಗಳಿಗೆ ಮಾತ್ರ ಸಂಬಂಧಿಸಿತ್ತು. ಈ ವಿಷಯಗಳಿಗೆ ಸಂಬಂಧಿಸಿದ ವಿವಾದವನ್ನು ಮುಸ್ಲಿಮ್ ಪರ್ಸನಲ್ ಲಾದ ಆಧಾರದಲ್ಲಿ ಬಗೆಹರಿಸಬೇಕೆಂದು ಈ ಕಾನೂನಿನಲ್ಲಿ ಹೇಳಲಾಯಿತು. ಉಳಿದಂತೆ, ಮುಸ್ಲಿಮರಿಗೆ ಸಂಬಂಧಿಸಿದ ಎಲ್ಲ ವಿವಾದಗಳನ್ನು ದೇಶದಲ್ಲಿ ಚಾಲ್ತಿಯಲ್ಲಿರುವ ಸಾಮಾನ್ಯ ನಿಯಮಗಳ ಆಧಾರದಲ್ಲಿಯೇ ಬಗೆಹರಿಸಬೇಕಾಗಿತ್ತು. ಹೀಗೆ ಕ್ರೈಸ್ತ ಮತ್ತು ಮುಸ್ಲಿಮ್ ವೈಯಕ್ತಿಕ ಸಂಹಿತೆಗಳು ಸಂವಿಧಾನ ರಚನೆಗಿಂತ ಮೊದಲೇ ಅಸ್ತಿತ್ವದಲ್ಲಿದ್ದುದರಿಂದ ಆ ಬಗ್ಗೆ ಮರು ಅವಲೋಕಿಸುವ ಅಗತ್ಯ ಸಂವಿಧಾನ ರಚನಾ ಮಂಡಳಿಗೆ ಎದುರಾಗಲಿಲ್ಲ. ಅಲ್ಲದೇ ಮುಸ್ಲಿಮ್ ಪರ್ಸನಲ್ ಲಾವನ್ನು ಬ್ರಿಟಿಷರು ರಚಿಸುವ ಸಂದರ್ಭದಲ್ಲಿ ಈ ದೇಶದಲ್ಲಿದ್ದ ದೊಡ್ಡದೊಂದು ಮುಸ್ಲಿಮ್ ಜನಸಂಖ್ಯೆ ಸ್ವಾತಂತ್ರ್ಯಾ ನಂತರ ಪಾಕಿಸ್ತಾನದ ಪಾಲಾಗಿತ್ತು. ಸಂವಿಧಾನ ರಚನೆಯ ವೇಳೆ ಈ ದೇಶದಲ್ಲಿ ಮುಸ್ಲಿಮರ ಜನಸಂಖ್ಯೆ ಇದ್ದುದು ಹೆಚ್ಚೆಂದರೆ 13% ಮಾತ್ರವೇ. ಆದರೆ ಉಳಿದ 85% ಜನಸಂಖ್ಯೆಗೆ (ಕ್ರೈಸ್ತರನ್ನು ಬಿಟ್ಟು) ಅವರದ್ದೇ ಆದ ಹಿಂದೂ ಕೋಡ್ ಎಂಬುದಿರಲಿಲ್ಲ. ವಿವಿಧ ಜಾತಿ-ಬುಡಕಟ್ಟುಗಳು ತಂತಮ್ಮಲ್ಲಿ ಚಾಲ್ತಿಯಲ್ಲಿರುವ ನ್ಯಾಯ ಸಂಹಿತೆಯಂತೆ ವೈಯಕ್ತಿಕ ವಿವಾದಗಳನ್ನು ಬಗೆಹರಿಸುತ್ತಿದ್ದುವು. ಅಲ್ಲೊಂದು  Uniformity  (ಸಮಾನತೆ) ಇರಲಿಲ್ಲ. ಮುಸ್ಲಿಮರ ವಿವಾಹ, ವಿಚ್ಛೇದನ, ಉತ್ತರಾಧಿಕಾರ, ದತ್ತು ಸ್ವೀಕಾರ ಮುಂತಾದುವುಗಳಿಗೆ ಏಕರೂಪ ಸಂಹಿತೆ(Uniform) ಇರುವಂತೆ ಹಿಂದೂಗಳಲ್ಲಿ ಇಂಥದ್ದೊಂದು ಏಕರೂಪತೆ ಇರಲಿಲ್ಲ. ಹಿಂದೂ ಮಹಿಳೆಯರಿಗೆ ಉತ್ತರಾಧಿಕಾರದ ಯಾವ ಹಕ್ಕೂ ಇರಲಿಲ್ಲ. ವಿಧವೆ ಹೆಣ್ಣಿಗೆ ಇನ್ನೊಂದು ಮದುವೆಯಾಗುವ ಅವಕಾಶ ಇರಲಿಲ್ಲ. ಅದೇ ವೇಳೆ, ಗಂಡಿಗೆ ಯಾವ ನಿರ್ಬಂಧವೂ ಇರಲಿಲ್ಲ. ಇಂಥ ಸಮಸ್ಯೆಯನ್ನು ಪರಿಹರಿಸುವುದಕ್ಕಾಗಿ 1956ರಲ್ಲಿ ಕೇಂದ್ರ ಸರಕಾರವು ಹಿಂದೂ ಸಿವಿಲ್ ಕೋಡ್ ಅನ್ನು ಜಾರಿಗೆ ತಂದಿತು. ಹೀಗೆ 1956ರ ಹೊತ್ತಿಗೆ ಮೂರೂ ಸಿವಿಲ್ ಕೋಡ್‍ಗಳು ಜಾರಿಗೆ ಬಂದುವು. ವಿವಾಹ, ವಿವಾಹ ವಿಚ್ಛೇದನ, ಉತ್ತರಾಧಿಕಾರ, ದತ್ತು ಸ್ವೀಕಾರ, ನಿರ್ವಹಣಾ ವೆಚ್ಚ ಮುಂತಾದುವು ಗಳಿಗೆ ಸಂಬಂಧಿಸಿ ಮುಸ್ಲಿಮ್, ಕ್ರೈಸ್ತ, ಹಿಂದೂಗಳು ಅವರವರ ವೈಯಕ್ತಿಕ ನಿಯಮದಂತೆ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದಕ್ಕೆ ಏರ್ಪಾಟು ಮಾಡಲಾಯಿತು. ಅಷ್ಟಕ್ಕೂ, ಈ ದೇಶದ ಎಲ್ಲ ನಾಗರಿಕರ ಎಲ್ಲ ಬಗೆಯ ವಿವಾದವನ್ನೂ ಒಂದೇ ಕಾನೂನಿನ ಅಡಿಯಲ್ಲಿ ಬಗೆಹರಿಸಬೇಕೆಂಬುದು ಸಂವಿಧಾನ ತಜ್ಞರ ಆಶಯವೇ ಆಗಿರುತ್ತಿದ್ದರೆ, ಸಂವಿಧಾನದ 25(1)ರ ಪರಿಚ್ಛೇದದಲ್ಲಿ ಧರ್ಮವನ್ನು ಅನುಸರಿಸುವ ಮತ್ತು ಪ್ರಚಾರ ಮಾಡುವ ಹಕ್ಕನ್ನು ಮೂಲಭೂತ ಹಕ್ಕುಗಳ ಪಟ್ಟಿಯಲ್ಲಿ ಅವರು ಸೇರಿಸುತ್ತಿದ್ದರೆ? ಸಂವಿಧಾನದಲ್ಲಿ 5 ಮೂಲಭೂತ ಹಕ್ಕುಗಳನ್ನು ಪಟ್ಟಿ ಮಾಡಲಾಗಿದೆ. ಈ 5 ಹಕ್ಕುಗಳು ಎಷ್ಟು ಮಹತ್ವ ಮತ್ತು ಪಾವಿತ್ರ್ಯತೆಯಿಂದ ಕೂಡಿದೆಯೆಂದರೆ, ಇವನ್ನು ಪಾರ್ಲಿಮೆಂಟ್‍ನ ಮೂಲಕವೋ ಅಥವಾ ಸುಪ್ರೀಮ್ ಕೋರ್ಟ್‍ನ ಮೂಲಕವೋ ರದ್ದುಪಡಿಸಲೂ ಅವಕಾಶವಿಲ್ಲ. ಇಷ್ಟೊಂದು ಪ್ರಾಮುಖ್ಯತೆ ಇರುವ ಪರಿಚ್ಛೇದವನ್ನು ಸಂವಿಧಾನದಲ್ಲಿ ಸೇರಿಸಿರುವ ಸಂವಿಧಾನ ತಜ್ಞರು ಸಂವಿಧಾನದ ನಿರ್ದೇಶಕ ತತ್ವಗಳ ಪಟ್ಟಿಯಲ್ಲಷ್ಟೇ ಯುನಿಫಾರ್ಮ್ (ಸಮಾನ) ಸಿವಿಲ್ ಕೋಡ್‍ನ ಬಗ್ಗೆ ಆಶಯ ವ್ಯಕ್ತಪಡಿಸಿದ್ದಾರೆ. ನಿಜವಾಗಿ, ಈ ಆಶಯವನ್ನು ವ್ಯಕ್ತಪಡಿಸುವಾಗ ಹಿಂದೂ ಸಿವಿಲ್ ಕೋಡ್ ರೂಪು ಪಡೆದಿರಲಿಲ್ಲ. ಜಾರಿಯೂ ಆಗಿರಲಿಲ್ಲ. ಸಂವಿಧಾನದ ರಚನಾ ಕಾರ್ಯ 1949 ಸೆಪ್ಟೆಂಬರ್‍ನಲ್ಲಿ ಸಂಪೂರ್ಣಗೊಂಡಿತ್ತು. 1950 ಜನವರಿ 26ರಂದು ಭಾರತದ ಪಾರ್ಲಿಮೆಂಟ್ ಸಂವಿಧಾನವನ್ನು ಅಂಗೀಕರಿಸಿತು. 1956ರಲ್ಲಿ ಹಿಂದೂ ಸಿವಿಲ್ ಕೋಡ್ ಅನ್ನು ಭಾರತದ ಪಾರ್ಲಿಮೆಂಟ್ ಅಂಗೀಕರಿಸಿತು. ಒಂದು ರೀತಿಯಲ್ಲಿ, ಈ ದೇಶದ ಪ್ರಮುಖ ಮೂರು ಧರ್ಮಾನುಯಾಯಿಗಳು ತಮ್ಮ ವಿವಾಹ, ವಿವಾಹ ವಿಚ್ಛೇದನ, ಉತ್ತರಾಧಿಕಾರ ಮುಂತಾದ ವೈಯಕ್ತಿಕ ವಿವಾದಗಳನ್ನು ತಮ್ಮ ಧರ್ಮಾಧಾರಿತ ಸಮಾನ (Uniform) ನಿಯಮ ಸಂಹಿತೆಗಳ ಅಡಿಯಲ್ಲೇ ಬಗೆಹರಿಸಿಕೊಳ್ಳಬೇಕೆಂಬ ಆಶಯದಲ್ಲಿ ಮಾಡಲಾದ ವ್ಯವಸ್ಥೆ ಇದು. ಕರ್ನಾಟಕದ ಮುಸ್ಲಿಮ್, ಗುಜರಾತ್‍ನ ಮುಸ್ಲಿಮ್ ಅಥವಾ ಕಾಶ್ಮೀರದ ಮುಸ್ಲಿಮನಿಗೆ ವಿವಾಹ, ವಿಚ್ಛೇದನ.. ಮುಂತಾದುವುಗಳಲ್ಲಿ ಬೇರೆ ಬೇರೆ ನಿಯಮಗಳಿಲ್ಲ. ಅಲ್ಲೊಂದು Uniformity ಇದೆ. ಹಾಗೆಯೇ, ಉತ್ತರ ಪ್ರದೇಶದ ಹಿಂದೂ, ತಮಿಳ್ನಾಡಿನ ಹಿಂದೂ, ಕೇರಳ, ಅಸ್ಸಾಮ್‍ನ ಹಿಂದೂವಿಗೂ ಸಮಾನವಾದ ನಿಯಮ ಸಂಹಿತೆ ಇದೆ. ಕ್ರೈಸ್ತರಿಗೂ ಹಾಗೆಯೇ. ಹಿಂದೂ ಧರ್ಮದ ಅಡಿಯಲ್ಲಿ ಗುರುತಿಸಿಕೊಳ್ಳುವ ವ್ಯಕ್ತಿಯೋರ್ವವ್ಯಕ್ತಿ  ಇಂಥ ವೈಯಕ್ತಿಕ ವಿವಾದಗಳ ಸಂದರ್ಭದಲ್ಲಿ ಸ್ಥಳೀಯ ಅಥವಾ ತನ್ನ ಪಾರಂಪರಿಕ ನಿಯಮವನ್ನು ಅನುಸರಿಸುವಂತಿಲ್ಲ. ತಾನು ಇಂತಿಂಥ ಬುಡಕಟ್ಟಿನವ, ತನ್ನ ಹಳ್ಳಿಯಲ್ಲಿ ವಿವಾಹಕ್ಕೆ ಬೇರೆಯದೇ ಆದ ನಿಯಮವಿದೆ ಎಂದು ಸಮರ್ಥಿಸುವಂತಿಲ್ಲ. ಅಲ್ಲೊಂದು  ಸಮಾನ (Uniformity) ನಿಯಮ ಇದೆ. ಅದರ ಆಧಾರದಲ್ಲೇ ಎಲ್ಲ ಹಿಂದೂಗಳ ಇಂಥ ವಿವಾದವನ್ನು ಬಗೆಹರಿಸಲಾಗುತ್ತದೆ. ಹಿಂದೂಗಳು ಎಂದು ಗುರುತಿಸಿಕೊಳ್ಳುವ ಎಲ್ಲರಿಗೂ ಈ ನಿಯಮ ಸಮಾನವಾಗಿ ಅನ್ವಯಿಸುತ್ತದೆ. ಇನ್ನು, ಮುಸ್ಲಿಮ್ ಎಂದು ಗುರುತಿಸಿಕೊಳ್ಳುವ ಪ್ರತಿಯೊಬ್ಬರಿಗೂ ಇಂಥ ವಿವಾದಗಳ ಸಂದರ್ಭದಲ್ಲಿ ಹಿಂದೂ ಕೋಡ್‍ನ ಮೊರೆ ಹೋಗುವಂತಿಲ್ಲ. ಅವರು ಮುಸ್ಲಿಮ್ ಪರ್ಸನಲ್ ಲಾದಂತೆ ವಿವಾದವನ್ನು ಬಗೆಹರಿಸಿಕೊಳ್ಳಬೇಕು. ಅಲ್ಲಿ ಎಲ್ಲರಿಗೂ ಸಮಾನವಾದ (Uniform) ಸಂಹಿತೆಯಿದೆ. ಕ್ರೈಸ್ತರು ತಮ್ಮ ವೈಯಕ್ತಿಕ ವಿವಾದವನ್ನು ಕ್ರೈಸ್ತ ಸಿವಿಲ್ ಕೋಡ್‍ನ ಮೂಲಕವೇ ಪರಿಹರಿಸಿಕೊಳ್ಳಬೇಕು. ಬಹುಶಃ ಸಂವಿಧಾನದ ನಿರ್ದೇಶಕ ತತ್ವಗಳಲ್ಲಿ ವ್ಯಕ್ತಪಡಿಸಲಾಗಿರುವ ಆಶಯದ ಮೂಲ ಉದ್ದೇಶ ಇದುವೇ ಆಗಿದೆಯೇನೋ ಎಂದೆನಿಸುತ್ತದೆ.    
        ಒಂದು ವೇಳೆ, ಸಮಾನ (Uniform) ನಾಗರಿಕ ಸಂಹಿತೆಯ ಅರ್ಥ ಇದು ಅಲ್ಲ ಎಂದಾದರೆ, ಈ ಸಂಹಿತೆಯ ಸ್ವರೂಪ ಹೇಗೆ? ಈ ಸಂಹಿತೆಯ ರಚನೆಗೆ ಆಧಾರ ಯಾವುದು? ಈಗಿರುವ ಹಿಂದೂ ಸಿವಿಲ್ ಕೋಡ್‍ನ ಪ್ರಕಾರ, ಪತ್ನಿ ಮತ್ತು ಮಕ್ಕಳಿರುವ ಓರ್ವ ವ್ಯಕ್ತಿ ಮೃತಪಟ್ಟರೆ ಆತನ ಆಸ್ತಿಯಲ್ಲಿ ಆತನ ತಂದೆಗೆ ಯಾವ ಪಾಲೂ ಇಲ್ಲ. ತಾಯಿಗೆ ಮಾತ್ರ ಇದೆ. ಕ್ರೈಸ್ತ ಸಿವಿಲ್ ಕೋಡ್‍ನ ಪ್ರಕಾರ ತಂದೆ-ತಾಯಿ ಇಬ್ಬರಿಗೂ ನಯಾ ಪೈಸೆ ಲಭ್ಯವಾಗುವುದಿಲ್ಲ. ಪತ್ನಿ ಮತ್ತು ಮಕ್ಕಳಿಗೆ 3ರಲ್ಲಿ ಒಂದಂಶವಷ್ಟೇ ಸಿಗುತ್ತದೆ. ಮುಸ್ಲಿಮ್ ಪರ್ಸನಲ್ ಲಾದ ಪ್ರಕಾರ ತಂದೆಗೆ ಆರರಲ್ಲಿ ಒಂದು, ತಾಯಿಗೆ ಆರರಲ್ಲಿ ಒಂದು, ಪತ್ನಿಗೆ 8ರಲ್ಲಿ ಒಂದು ಪಾಲು ಸಿಗುತ್ತದೆ. ಮೃತನ ಹೆಣ್ಣು ಮತ್ತು ಗಂಡು ಮಕ್ಕಳಿಗೂ ಪಾಲು ಇದೆ. ಹೀಗಿರುವಾಗ ಸಮಾನ ನಾಗರಿಕ ಸಂಹಿತೆ ಈ ಮೂರರಲ್ಲಿ ಯಾವುದನ್ನು ನಿಯಮವಾಗಿ ಆಯ್ದುಕೊಳ್ಳಬೇಕು? ಕ್ರೈಸ್ತ ನಿಯಮದ ಪ್ರಕಾರ, ಓರ್ವ ತಂದೆ ತನ್ನ 10 ಮಕ್ಕಳ ಪೈಕಿ ಓರ್ವನಿಗೆ ತನ್ನೆಲ್ಲ ಆಸ್ತಿಯನ್ನು ಉಯಿಲು ಬರೆದುಕೊಟ್ಟರೆ ಅದು ಕಾನೂನುಬದ್ಧ. ಹಿಂದೂ ಸಂಹಿತೆಯೂ ಬಹುತೇಕ ಇದನ್ನೇ ಹೋಲುತ್ತದೆ. ಆದರೆ ಮುಸ್ಲಿಮ್ ಪರ್ಸನಲ್ ಲಾದಲ್ಲಿ ಇದು ಕಾನೂನುಬಾಹಿರ. ಮೃತಪಟ್ಟ ವ್ಯಕ್ತಿಯ ಆಸ್ತಿಯನ್ನು ಪಾಲು ಮಾಡಬೇಕಾದದ್ದು ಆತನ ಉಯಿಲಿನಂತೆ ಅಲ್ಲ, ದೇವನ ಕಾನೂನಿನಂತೆ ಎಂಬುದು ಶರೀಅತ್‍ನ ನಿಲುವು. ಇಲ್ಲಿ ಪಕ್ಷಪಾತಕ್ಕೆ ಅವಕಾಶ ಇಲ್ಲ. ಓರ್ವ ಮಗನನ್ನು ಕುಬೇರನನ್ನಾಗಿಸಿ ಉಳಿದವರನ್ನು ಪಾಪರ್ ಆಗಿಸುವುದನ್ನು ಶರೀಅತ್ ಅಂಗೀಕರಿಸುವುದಿಲ್ಲ. ಇವಲ್ಲದೇ ವಿವಾಹ ಮತ್ತು ವಿಚ್ಛೇದನಗಳಲ್ಲೂ ಈ ಮೂರು ಸಂಹಿತೆಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಶರೀಅತ್ ಪ್ರಕಾರ ಮದುವೆಯ ಸಂದರ್ಭದಲ್ಲಿ ವರ ಕಡ್ಡಾಯವಾಗಿ ಮಹರ್ (ವಿವಾಹ ಧನ) ಪಾವತಿಸಬೇಕಾಗುತ್ತದೆ. ಅದೆಷ್ಟು ಅಂದರೆ, ಆಕೆ ಕೇಳಿದಷ್ಟು. ಅದೇ ಕಾರಣಕ್ಕಾಗಿ ಆಕೆ ಮದುವೆಗೆ ನಿರಾಕರಿಸಬಹುದು. ಮಾತ್ರವಲ್ಲ, ಅದರ ಸಂಪೂರ್ಣ ಒಡೆತನ ಆಕೆಯದ್ದೇ. ವಿವಾಹ ವಿಚ್ಛೇದನವೂ ತಲಾಕ್ ತಲಾಕ್ ತಲಾಕ್ ನಿಂದ ಕೊನೆಗೊಳ್ಳುವುದಿಲ್ಲ. ತಲಾಕ್‍ನ ಕನಿಷ್ಠ ಅವಧಿ 3 ತಿಂಗಳು. ವಿವಿಧ ಹಂತಗಳನ್ನು ದಾಟಿದ ಬಳಿಕ ವಿಚ್ಛೇದನ ನಡೆಯುತ್ತದೆ. ಹಿಂದೂ ಮತ್ತು ಕ್ರೈಸ್ತ ಸಂಹಿತೆಗಳು ಇದಕ್ಕೆ ಯಾವ ನೆಲೆಯಲ್ಲೂ ಹೋಲದಷ್ಟು ಭಿನ್ನವಾಗಿವೆ. ಅಲ್ಲಿ ಮದುವೆಯನ್ನು ಜನ್ಮಾಂತರದ ಸಂಬಂಧವಾಗಿ ಕಾಣಲಾಗುತ್ತದೆ. ವಿಚ್ಛೇದನ ಪ್ರಕರಣವು ದಶಕಗಳ ಕಾಲ ಮುಂದುವರಿಯುವುದೂ ಇದೆ. ಇಂಥ ವ್ಯತ್ಯಾಸಗಳಿರುವಾಗ ಪ್ರಸ್ತಾವಿತ ಸಮಾನ ನಾಗರಿಕ ಸಂಹಿತೆಯ ಸ್ವರೂಪ ಹೇಗಿರಬಹುದು? ಅದು ಆಯ್ಕೆ ಮಾಡುವ ನಿಯಮಗಳು ಯಾವುದಾಗಿರಬಹುದು? ಈ ಮೂರು ಧರ್ಮಗಳಲ್ಲಿ ಉತ್ತಮವಾಗಿರುವ ನಿಯಮಗಳನ್ನು ಅದು ಆಯ್ದುಕೊಳ್ಳುತ್ತದೋ ಅಥವಾ ಹೊರಗಿನಿಂದ ಆಮದು ಮಾಡುತ್ತದೋ? ಅಷ್ಟಕ್ಕೂ,
       ಮೊದಲು ಈ ಪ್ರಸ್ತಾವಿತ ಸಮಾನ ನಾಗರಿಕ ಸಂಹಿತೆಯ  ಕರಡು ಪ್ರತಿಯನ್ನು ಸರಕಾರ ಬಿಡುಗಡೆಗೊಳಿಸಲಿ. ಹಾಗಾದರೆ, ಸರಕಾರದ ಉದ್ದೇಶವೇನು ಎಂಬುದನ್ನು ಆ ಕರಡು ಪ್ರತಿಯೇ ನಿರ್ಧರಿಸಬಲ್ಲುದು.1 comment: