Thursday, July 21, 2016

ಮಗು, ಮಣ್ಣು ಮತ್ತು ಕಲಿಕೆ

 ಬೆಂಗಳೂರಿನ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಸರಕಾರಿ ಶಾಲೆ
       ಶಾಲೆಯ ಬಗ್ಗೆ ನಮ್ಮ ಪರಿಕಲ್ಪನೆಗಳು ಏನಾಗಿವೆ ಮತ್ತು ಏನಾಗಿರಬೇಕು? ಬಾಗಿಲು ಮುಚ್ಚುವ ಸರಕಾರಿ ಶಾಲೆಗಳ
ಮೇಲೆ ನಡೆಯುವ ಚರ್ಚೆಯು ಬಾಗಿಲು ತೆರೆದಿರುವ ಶಾಲೆಗಳ ಮೇಲೆ ಪರಿಣಾಮ ಬೀರುವಷ್ಟು ಪ್ರಬುದ್ಧವಾಗಿವೆಯೇ? ಶಾಲೆ ಎಂಬುದು ಒಂದು ಮಗುವಿನ ಪಾಲಿಗೆ ಅಕ್ಷರವನ್ನು ಕಲಿಸುವ ಬರೇ ಒಂದು ಕೊಠಡಿ ಮಾತ್ರವೇ ಅಲ್ಲ, ಮಗುವನ್ನು ಸಮಗ್ರವಾಗಿ ವಿಕಾಸಗೊಳಿಸಿ ಸಮಾ ಜಕ್ಕೆ ಅರ್ಪಿಸುವ ಜಾಗ ಕೂಡ. ಈ ಸಮಗ್ರ ಎಂಬ ಪರಿ ಕಲ್ಪನೆಯೊಳಗೆ ಸೇರಿಕೊಳ್ಳಲು ಅರ್ಹತೆಯಿರುವ ಶಾಲೆಗಳು ನಮ್ಮ ನಡುವೆ ಎಷ್ಟಿವೆ? ಸರಕಾರಿ ಮತ್ತು ಸರಕಾರೇತರ ಎಂಬು ದಾಗಿ ವಿಂಗಡಿಸಿ ನೋಡಿದರೂ ಈ ಪ್ರಶ್ನೆ ಅತ್ಯಂತ ಸಕಾಲಿಕ ಮತ್ತು ಸಮಯೋಚಿತ. ಒಂದು ಮಗುವಿನ ಪಾಲಿಗೆ ಸಮಗ್ರ ಅಭಿವೃದ್ಧಿ ಎಂಬುದು ಯಾವುದೆಲ್ಲ? ಭಾರತದ ಭೌಗೋಳಿಕ ವ್ಯಾಪ್ತಿ, ಐತಿಹಾಸಿಕ ಘಟನಾವಳಿಗಳು, ಸಂಸ್ಕøತಿ, ಜೀವ ವೈವಿಧ್ಯ, ರಾಷ್ಟ್ರಗೀತೆ.. ಇತ್ಯಾದಿ ಇತ್ಯಾದಿಗಳ ಅರಿವು ಮಗುವಿಗೆ ಇರಬೇಕಾದುದು ಅಗತ್ಯ ನಿಜ. ಆದರೆ ಇವುಗಳಾಚೆಗೆ ಒಂದು ಮಗುವನ್ನು ದೇಶದ ಅಭಿವೃದ್ಧಿಯಲ್ಲಿ ಪಾಲು ದಾರಗೊಳಿಸಬಹುದಾದ ಪ್ರಾಯೋಗಿಕ ಕಾರ್ಯಗಳು ಇವೆಯೇ? ಇದ್ದರೆ ಅವು ಏನೆಲ್ಲ?
          ದೇಶದ ತುಂಬ ಹರಡಿರುವ ಅಸಂಖ್ಯಾತ ಶಾಲೆಗಳಲ್ಲಿ ಕೆಲವು ಶಾಲೆಗಳು ಇಂಥ ಪ್ರಶ್ನೆಗಳ ಹುಟ್ಟಿಗೆ ಕಾರಣವಾಗಿವೆ. ತಮಿಳುನಾಡಿನಲ್ಲಿ ಸರಕಾರಿ ಶಾಲೆಯೊಂದಿದೆ. ಆ ಶಾಲೆಯಲ್ಲಿ ಪಾಠಗಳು ಮಾತ್ರ ನಡೆ ಯುತ್ತಿರುವುದಲ್ಲ. ಆ ಶಾಲೆ ಹೆಸರುವಾಸಿಯಾಗಿರುವುದೇ ಅಲ್ಲಿನ ಅಧ್ಯಾಪಕರ ಭಿನ್ನ ಕಲಿಕಾ ಪ್ರವೃತ್ತಿಗಾಗಿ. ಆ ಶಾಲೆಯಲ್ಲಿ ಅತಿ ವಿಶಾಲವಾದ ಲೈಬ್ರರಿ ಇದೆ. ಆ ಲೈಬ್ರರಿಯಲ್ಲಿ ಮೂರೂವರೆ ಸಾವಿರಕ್ಕಿಂತಲೂ ಅಧಿಕ ಸಾಹಿತ್ಯ ಕೃತಿಗಳಿವೆ. ಅಲ್ಲಿನ ಮಕ್ಕಳು ವಿವಿಧ ಸಾಹಿತ್ಯ ಕೃತಿಗಳ ಮೇಲೆ ವಿಮರ್ಶೆ ಬರೆಯುತ್ತಾರೆ. ಓದುತ್ತಾರೆ. ಕ್ಲಾಸ್‍ರೂಂನಲ್ಲಿ ಆ ಬಗ್ಗೆ ಚರ್ಚೆಗಳು ನಡೆಯುತ್ತವೆ. ಕತೆ, ಕವನ, ವಿಮರ್ಶಾ ಬರಹಗಳು ಆ ಶಾಲೆಯ ಮಕ್ಕಳಲ್ಲಿ ಎಷ್ಟು ಪರಿಚಿತವಾಗಿವೆಯೆಂದರೆ ಅದು ಪಠ್ಯದ ಭಾಗವೆಂದೇ ಅಂದುಕೊಳ್ಳುವಷ್ಟು. ಪಠ್ಯ ಮತ್ತು ಅಂಕ ಮಾತ್ರವೇ ಮುಖ್ಯ ಮತ್ತು ಅವು ಮಾತ್ರ ಶಿಕ್ಷಣ ಎಂಬ ಸಾಮಾನ್ಯ ಪರಿಕಲ್ಪನೆಯಿಂದ ಮಕ್ಕಳನ್ನು ಹೊರತಂದು ಈ ಶಾಲೆ ರಾಜ್ಯದಲ್ಲಿಯೇ ಹೊಸ ಚರ್ಚೆಗೆ ನಾಂದಿ ಹಾಡಿದೆ. ಎಲ್ಲಾದರೂ ಕಥಾ ಸ್ಪರ್ಧೆ ಇದ್ದರೆ ಈ ಮಕ್ಕಳದ್ದೇ ಪ್ರಾಬಲ್ಯ. ಕವನಕ್ಕೂ ಈ ಮಕ್ಕಳೇ ಹಕ್ಕುದಾರರು. ವಿಮರ್ಶಾ ಸಾಹಿತ್ಯದಲ್ಲೂ ಈ ಮಕ್ಕಳೇ ಮುಂದು. ‘ಮಕ್ಕಳಲ್ಲಿ ಓದು ಕಡಿಮೆಯಾಗುತ್ತಿದೆ, ಸಾಹಿತ್ಯದ ಅಭಿರುಚಿ ಇಲ್ಲ, ಯಾಂತ್ರಿಕವಾಗಿ ಈ ಪೀಳಿಗೆ ಬೆಳೆಯುತ್ತಿದೆ..’ ಎಂಬೆಲ್ಲ ಆರೋಪಗಳ ನಡುವೆ ಇಂಥದ್ದೊಂದು ಪ್ರಯೋಗ ನಿಜಕ್ಕೂ ಮಾದರಿ ಅನಿಸುತ್ತಿದೆ. ಬೆಂಗಳೂರಿನ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಸರಕಾರಿ ಶಾಲೆಯನ್ನೂ ನಾವಿಲ್ಲಿ ಉದಾಹರಿಸಬಹುದು. ಇಲ್ಲಿ ಮಕ್ಕಳ ಕೈ ಕೆಸರಾಗುತ್ತದೆ. ಮಕ್ಕಳು ಪಿಕ್ಕಾಸು, ಹಾರೆಗಳನ್ನು ಬಳಸುತ್ತಾರೆ. ನೆಲ ಅಗೆಯುತ್ತಾರೆ. ಹೂದೋಟಗಳನ್ನು ನಿರ್ವಹಿಸುತ್ತಾರೆ. ಅಂದಹಾಗೆ, ಸ್ವಾತಂತ್ರ್ಯದ 69 ವರ್ಷಗಳ ಬಳಿಕವೂ ಈ ದೇಶದ ಶಿಕ್ಷಣ ರಂಗವು ನಿರೀಕ್ಷಿತ ಮಟ್ಟದಲ್ಲಿ ಬೆಳೆದಿಲ್ಲ ಎಂದೆಲ್ಲಾ ಕಳಕಳಿ ವ್ಯಕ್ತಪಡಿಸುವುದನ್ನು ಅಭ್ಯಾಸ ಮಾಡಿಕೊಂಡು ಬಂದ ಪರಂಪರೆ ಇಲ್ಲಿಯದು. ಸರ ಕಾರಿ ಶಾಲೆಗಳು ಬಾಗಿಲು ಮುಚ್ಚಿದರೆ ಸರಕಾರವನ್ನು ದೂರುವುದು ಸುಲಭ ಮತ್ತು ಜವಾಬ್ದಾರಿಯಿಂದ ಕಳಚಿಕೊಳ್ಳುವುದಕ್ಕೆ ನಮಗೆ ಒಂದು ಬಳಸು ವಿಧಾನವೂ ಇದುವೇ. ತಕ್ಷಣ ನಾವು ಇಂಥ ಬಾಗಿಲು ಮುಚ್ಚುವಿಕೆಗಳಿಂದ ಆಗುವ ದೂರಗಾಮಿ ಪರಿಣಾಮಗಳ ಬಗ್ಗೆ ಕರುಬುವುದಿದೆ. ಕಳೆದ ವರ್ಷ ಎಷ್ಟು ಡ್ರಾಪ್‍ಔಟ್ ಆಯಿತು, ಈ ವರ್ಷ ಬಾಗಿಲು ಮುಚ್ಚುವುದರಿಂದ ಎಷ್ಟು ಆಗಲಿದೆ, ಅದರಿಂದಾಗಿ ಸಾಮಾಜಿಕ, ಆರ್ಥಿಕ ಪ್ರಗತಿಯ ಮೇಲೆ ಬೀರುವ ಅಡ್ಡ ಪರಿಣಾಮಗಳು ಏನೇನು.. ಎಂಬುದರ ವಿಶ್ಲೇಷಣೆ ನಡೆಯುತ್ತದೆ. ಇತ್ತೀಚೆಗಷ್ಟೇ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯು ಬಿಡುಗಡೆಗೊಳಿಸಿದ ವರದಿಯ ಪ್ರಕಾರ, ಪ್ರತಿ 10ರಲ್ಲಿ 4 ಮಕ್ಕಳು 8ನೇ ಕ್ಲಾಸ್‍ಗಿಂತ ಮೊದಲೇ ಡ್ರಾಪ್‍ಔಟ್ ಆಗುತ್ತಾರೆ. ಇವರಲ್ಲಿ ಬಡವರು, ವಿಶೇಷ ಚೇತನರು, ವಲಸಿಗರೇ ಅಧಿಕ. ಇವು ಮತ್ತು ಇಂಥ ಅನೇಕಾರು ಅಂಕಿ-ಅಂಶಗಳನ್ನು ಉಲ್ಲೇಖಿಸಿ ಸರಕಾರವನ್ನು ಮತ್ತು ಕೆಲವೊಮ್ಮೆ ಹೆತ್ತವರನ್ನು ಬೈಯ್ದು ಭಾಷಣ, ಬರಹಗಳಿಗೆ ನಾವು ಇತಿಶ್ರೀ ಹಾಕುವುದೂ ಮತ್ತು ಇದುವೇ ಕನ್ನಡ ಪ್ರೇಮವಾಗಿ ಗುರುತಿಸಿಕೊಳ್ಳುವುದೂ ನಡೆಯುತ್ತಿದೆ. ನಿಜಕ್ಕೂ, ಒಂದು ಮುಚ್ಚುಗಡೆಯಾಗುವ ಶಾಲೆಯ ಬಗ್ಗೆ ವ್ಯಕ್ತವಾಗಬೇಕಾದ ಅಭಿಪ್ರಾಯಗಳು ಇಷ್ಟೇ ಆಗಿರಬೇಕೇ? ಅದರಾಚೆಗೆ, ಈ ಮುಚ್ಚಿದ ಬಾಗಿಲುಗಳನ್ನು ತೆರೆಯಲು ಅಥವಾ ಮುಚ್ಚದೇ ಹೋಗಲು ಬೇರೆ ಪರ್ಯಾಯ ಕ್ರಮಗಳನ್ನು ಹೇಗೆ ಹುಡುಕಬಹುದು?
          ಕೇರಳದ ಕೋಝಿಕ್ಕೋಡ್‍ನಲ್ಲಿರುವ ಸರಕಾರಿ ಹೆಣ್ಮಕ್ಕಳ ಶಾಲೆ ಈ ಹಿನ್ನೆಲೆಯಲ್ಲಿ ಚರ್ಚೆಗೆ ಅತ್ಯಂತ ಯೋಗ್ಯವಾಗಿ ಕಾಣುತ್ತದೆ. ದೇಶದ ಅತ್ಯುನ್ನತ 10 ಶಾಲೆಗಳಲ್ಲಿ ಒಂದಾಗಿ ಗುರುತಿಗೀಡಾಗಿರುವ ಈ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳೆಲ್ಲ ತೀರಾ ಬಡತನದ ಹಿನ್ನೆಲೆಯ, ಬೀಡಿ ಕಟ್ಟುವ ಕುಟುಂಬದವು. ಈ ಶಾಲೆಯೂ ಬಾಗಿಲು ಮುಚ್ಚಿಕೊಂಡು ಒಂದಷ್ಟು ಮಲಯಾಳಂ ಪ್ರೇಮಿಗಳ ಶೋಕವನ್ನು ಗಿಟ್ಟಿಸಿಕೊಳ್ಳುವುದಕ್ಕೆ ಎಲ್ಲ ರೀತಿಯಲ್ಲೂ ಅರ್ಹವಾಗಿತ್ತು. ಆದರೆ, ನಾಡಿನ ಕೆಲವರು ಈ ಶಾಲೆಯ ಬಗ್ಗೆ ಕಾಳಜಿ ತೋರಿದರು. ಈ ಶಾಲೆಯನ್ನು ಸರ್ವ ಸೌಲಭ್ಯಗಳುಳ್ಳ ಶಾಲೆಯಾಗಿ ಪರಿವರ್ತಿಸಬೇಕೆಂಬ ನಿಟ್ಟಿನಲ್ಲಿ ಪ್ರಯತ್ನಕ್ಕಿಳಿದರು. ಅದಕ್ಕಾಗಿ ವಿವಿಧ ಸಂಸ್ಥೆಗಳನ್ನು, ಶ್ರೀಮಂತರನ್ನೂ ಸಂಪರ್ಕಿಸಿದರು. ಈ ಕಾರಣದಿಂದಾಗಿ, ಕೋಝಿಕ್ಕೋಡ್‍ನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್, ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಝೇಶನ್ ಮತ್ತು ಇನ್ಫೋಸಿಸ್‍ಗಳು ಆ ಶಾಲೆಯ ನೆರವಿಗೆ ಬಂದುವು. ಓರ್ವ ದಾನಿ 15 ಕೋಟಿ ರೂಪಾಯಿ ದೇಣಿಗೆ ನೀಡಿದರು. ಇದರಿಂದಾಗಿ ಇಡೀ ಶಾಲೆಯ ಸ್ವರೂಪವೇ ಬದ ಲಾಯಿತು. ಖ್ಯಾತ ಸ್ಕಾಟಿಷ್ ವಿನ್ಯಾಸಕಾರ ವಿಲಿಯಂ ಕೂಪರ್‍ರ ಸಲಹೆಯಂತೆ ವಿವಿಧ ಕಾಮಗಾರಿಗಳು ನಡೆದುವು. ಒಂದು ವಿಶಾಲ ಒಳಾಂಗಣ ಕ್ರೀಡಾಂಗಣವನ್ನು ನಿರ್ಮಿಸಲಾಯಿತು. ಈ ಕ್ರೀಡಾಂಗಣದಲ್ಲಿ 3 ಬಾಸ್ಕೆಟ್‍ಬಾಲ್ ಕೋರ್ಟ್, ಹಾಕಿ ಮೈದಾನ, ಫುಟ್‍ಬಾಲ್ ಮೈದಾನ, ಬ್ಯಾಡ್ಮಿಂಟನ್ ಕೋರ್ಟ್, 2 ಸಾವಿರ ಮಂದಿ ಕೂರಬಲ್ಲಷ್ಟು ವಿಶಾಲವಾದ ಡೈನಿಂಗ್ ಸಭಾಂಗಣ, 25 ಸಾವಿರ ಪುಸ್ತಕಗಳುಳ್ಳ ವಿಶಾಲ ಲೈಬ್ರರಿಯು ತಲೆ ಎತ್ತಿತು. ಇಸ್ರೋ ಸಂಸ್ಥೆಯು 4 ಸೈನ್ಸ್ ಲ್ಯಾಬ್‍ಗಳನ್ನು ಒದಗಿಸಿತು. 150 ಕಂಪ್ಯೂ ಟರ್‍ಗಳನ್ನು ಇನ್ಫೋಸಿಸ್ ಒದಗಿಸಿತು. ಕೋಝಿಕ್ಕೋಡ್‍ನ ಐಐಎಂ ಈ ಎಲ್ಲವುಗಳ ಜಾರಿಗೆ ಪೂರ್ಣ ಸಹಕಾರವನ್ನು ನೀಡಿತು. ಇವೆಲ್ಲದರ ಪರಿಣಾಮ ಎಷ್ಟು ವ್ಯಾಪಕ ಮಟ್ಟದಲ್ಲಿ ಆಯಿತೆಂದರೆ ಇಡೀ ಶಾಲೆ ರಾಜ್ಯದಲ್ಲಿಯೇ ಅತೀ ಉನ್ನತ ಮತ್ತು ಸರ್ವರ ಗಮನಕ್ಕೆ ಪಾತ್ರವಾಯಿತು. ಈ ವರ್ಷ ಈ ಶಾಲೆಯಲ್ಲಿ 2400 ಮಕ್ಕಳ ದಾಖಲಾತಿ ನಡೆದಿದೆ ಎಂಬುದೇ ಇದಕ್ಕಿರುವ ಅತ್ಯುತ್ತಮ ಪುರಾವೆ. ಮುಚ್ಚಿ ಬಿಡಬಹುದಾದ ಶಾಲೆಯೊಂದನ್ನು ಸರ್ವರೂ ಆಸೆಪಡುವ ಮತ್ತು ದೇಶದಲ್ಲೇ  ಉನ್ನತ ಶಾಲೆಗಳಲ್ಲಿ ಒಂದಾಗಿಸಲು ಸಾಧ್ಯವಿದೆ ಎಂಬುದಕ್ಕೆ ಉದಾಹರಣೆಯೂ ಇದುವೇ.
        ಆಧುನಿಕ ಕಾಲದ ಇಂದಿನ ಮಕ್ಕಳ ಎದುರು ಮೊಬೈಲ್, ಕಂಪ್ಯೂಟರ್, ಇಂಟರ್‍ನೆಟ್, ವಾಹನ ಮುಂತಾದ ಎಲ್ಲವೂ ಇದೆ. ಅವುಗಳ ಉಪಯೋಗ-ದುರುಪಯೋಗಗಳೂ ಅವುಗಳಿಗೆ ಗೊತ್ತಿದೆ. ಇದೇ ವೇಳೆ, ಹಾರೆ, ಪಿಕ್ಕಾಸು, ಗುದ್ದಲಿ, ಕೃಷಿ ಚಟು ವಟಿಕೆ, ಬಾವಿಯಿಂದ ನೀರೆತ್ತುವುದು, ಮಡಿಕೆ ತಯಾರಿ, ಉಳುಮೆ, ನೇಜು ಕೊಯ್ಯುವುದು.. ಮುಂತಾದ ಅನೇಕಾರು ಮಣ್ಣು ಸಂಬಂಧಿ ಚಟುವಟಿಕೆಗಳು ಅವರಿಂದ ಅಪರಿಚಿತವಾಗುತ್ತಲೂ ಇವೆ. ಮಗುವೊಂದರ ಸಮಗ್ರ ಬೆಳವಣಿಗೆಯೆಂಬುದು ಪುಸ್ತಕ, ಕಪ್ಪು ಬೋರ್ಡು, ಮಾರ್ಕು, ಯೂನಿಫಾರ್ಮು, ಶಾಲಾ ಬಸ್ಸು.. ಎಂಬಿವುಗಳನ್ನೇ ಆಧರಿಸಿ ಇರುವುದಲ್ಲವಲ್ಲ. ಅನ್ನ ಉಣ್ಣುವ ಮಗುವಿಗೆ ಅನ್ನದ ಹುಟ್ಟಿನ ಬಗ್ಗೆ ಕುತೂ ಹಲ ಹುಟ್ಟಬೇಕು. ಪೈರನ್ನು ನೋಡುವ ಮಗು, ಅದನ್ನು ಆನಂದಿಸುತ್ತಾ, ಪ್ರಶ್ನೆಗಳನ್ನು ಕೇಳುತ್ತಾ ಬೆರಗುಗೊಳ್ಳಬೇಕು. ನಳ್ಳಿ ನೀರಿಲ್ಲದ ಮತ್ತು ಬಾವಿಯಿಂದ ನೀರು ಸೇದಿಯೇ ಬದುಕುತ್ತಿದ್ದ ಅಜ್ಜ, ಮುತ್ತಜ್ಜಂದಿರ ಬಗ್ಗೆ ಅರಿವು ಪಡೆಯಬೇಕು. ಇಂಥ ಪರಂಪರೆಯ ಬಗ್ಗೆ ಜ್ಞಾನ ಪಡಕೊಳ್ಳುವುದರಿಂದ ಆಗುವ ದೊಡ್ಡ ಲಾಭ ಏನೆಂದರೆ, ಮಗು ಮಣ್ಣಿನ ಬಗ್ಗೆ, ಅದರ ಉತ್ಪನ್ನಗಳ ಬಗ್ಗೆ ಮತ್ತು ಆ ಉತ್ಪನ್ನ ವನ್ನು ಬೆಳೆಯುವವರ ಬಗ್ಗೆ ಕುತೂಹಲಗೊಳ್ಳುತ್ತದೆ. ಶಾಲೆಗಳಿಂದ ಇಂಥ ಕುತೂಹಲವನ್ನು ಹುಟ್ಟಿಸಲು ಸಾಧ್ಯವಿದೆ. ಶಾಲೆಯನ್ನು ಅಕ್ಷ ರಗಳ ಬಂಧನದಿಂದ ಬಿಡಿಸಿ ಮಣ್ಣಿನೊಂದಿಗೆ ಸರಸವಾಡಲು ಬಿಡಬೇಕು. ಎಷ್ಟು ಅವಕಾಶ ಇದೆಯೋ ಅಷ್ಟರ ಮಟ್ಟಿಗೆ ಶಾಲಾ ಕ್ಯಾಂಪಸ್ ಅನ್ನು ವಿವಿಧ ಕೃಷಿ ಚಟುವಟಿಕೆಗಳಿಗೆ ಮುಕ್ತವಾಗಿಡಬೇಕು. ಹಳ್ಳಿ ಪ್ರದೇಶಗಳಲ್ಲಂತೂ ಶಾಲಾ ಕ್ಯಾಂಪಸ್ ವಿಶಾಲವಾಗಿರುತ್ತದೆ. ಮಕ್ಕಳು ವಿವಿಧ ತರಕಾರಿ ಬೆಳೆಗಳನ್ನು ಬೆಳೆಯುವಂತೆ ಪ್ರೇರೇಪಣೆ ನೀಡಬೇಕು. ಇಂಥ ಚಟುವಟಿಕೆಯನ್ನು ಪಠ್ಯದ ಭಾಗದಂತೆಯೇ ಪರಿಗಣಿಸಿ ಅದಕ್ಕೊಂದು ನಿಶ್ಚಿತ ಸಮಯವನ್ನು ಮೀಸಲಿಟ್ಟರೆ ಅದು ದೂರಗಾಮಿ ಪರಿಣಾಮ ಬೀರಬಹುದು. ಶಾಲಾ ಸಮಯ ಕ್ಕಿಂತ ಮೊದಲೇ ಶಾಲೆಗೆ ಬಂದು ತಾನು ಬೆಳೆದ ತರಕಾರಿಗಳ ಜೊತೆ ಸಮಯ ಕಳೆಯಲು ಮಕ್ಕಳನ್ನು ಅದು ಪ್ರೇರೇಪಿಸಬಹುದು. ಒಂದು ಬೀಜ ಮೊಳಕೆಯೊಡೆಯುವಾಗ ಮಗುವೂ ಅದರೊಂದಿಗೆ ಬೆಳೆಯಬಹುದು. ಅದರೊಳಗೊಂದು ಕೌತುಕ, ಕುತೂಹಲ, ರೋಮಾಂಚನ ಹುಟ್ಟಿಕೊಳ್ಳಬಹುದು. ಮನೆ ಸೇರಿಕೊಂಡ ಬಳಿಕ ಮನೆಯಲ್ಲೂ ಅದರ ಪ್ರಯೋಗಕ್ಕೆ ಮುಂದಾಗಬಹುದು. ಹೀಗೆ ಮಣ್ಣು ಮತ್ತು ಮಗು ಜೊತೆಜೊತೆಯಾಗಿ ಬೆಳೆಯುವುದೆಂದರೆ ಪರಿಪೂರ್ಣ ಮಾನವ ಜೀವಿಯೊಂದು ಬೆಳೆದಂತೆ. ದುರಂತ ಏನೆಂದರೆ, ಇಂದಿನ ಮಗು ಮಣ್ಣಿನ ಹೊರಗೆ ಬೆಳೆಯುತ್ತಿದೆ. ಅದರ ಬೆಳವಣಿಗೆಗೂ ಮಣ್ಣಿಗೂ ಬಹುತೇಕ ಯಾವ ಸಂಬಂಧವೂ ಇಲ್ಲದಷ್ಟು ಅಂತರ ನಿರ್ಮಾಣವಾಗುತ್ತಿದೆ. ಕಾಂಕ್ರೀಟು ನೆಲ, ಡಾಮಾರು ರಸ್ತೆ, ವಾಹನದಲ್ಲಿ ಸಂಚಾರ, ಮತ್ತೆ ಶಾಲೆಯ ಮಾರ್ಬಲ್ ನೆಲದ ಮೇಲೆ ಓಡಾಟ.. ಹೀಗೆ ಎಲ್ಲವೂ ಮಣ್ಣಿ ನೊಂದಿಗೆ ನೇರವಾಗಿ ಸಂಪರ್ಕ ಇಲ್ಲದ ಬದುಕು ಮಗುವಿನದು. ಹಾಗಂತ, ಇದನ್ನು ತಿರಸ್ಕರಿಸಿ ಬದುಕಲು ಇವತ್ತು ಸುಲಭವೂ ಅಲ್ಲ. ಆದರೆ, ಈ ಬದುಕು ಮಾತ್ರವೇ ಅಂತಿಮ ಎಂಬ ರೀತಿ ಯಲ್ಲಿ ಇತರ ಸಾಧ್ಯತೆಗಳ ಬಾಗಿಲನ್ನೇ ಮುಚ್ಚಿ ಬಿಡಬೇಕಾದ ಅಗತ್ಯವೇನೂ ಇಲ್ಲವಲ್ಲ. ಶಾಲಾ ಕ್ಯಾಂಪಸ್ ಅನ್ನು ಮಗು ಮತ್ತು ಮಣ್ಣಿನ ಸಂಭಾಷಣೆಗಾಗಿ ಯಾಕೆ ಉಪಯೋಗಿಸಬಾರದು? ಆಧುನಿಕ ಶಿಕ್ಷಣ ಮತ್ತು ಕಾಂಕ್ರೀಟು ಅಭಿವೃದ್ಧಿಯ ಮೇಲೆ ಆರೋಪಗಳನ್ನು ಹೊರಿಸುತ್ತಾ ಮತ್ತು ಕೊನೆಗೆ ಅದರೊಂದಿಗೆ ರಾಜಿ ಮಾಡಿಕೊಳ್ಳುವುದನ್ನೇ ಪರಿಹಾರವಾಗಿ ಕಾಣುವುದಕ್ಕಿಂತ, ಇರುವ ಅವಕಾಶವನ್ನು ಯಾಕೆ ಸದುಪಯೋಗಪಡಿಸಬಾರದು? ನಿಜವಾಗಿ,
        ಮಗು ಮತ್ತು ಮಣ್ಣಿನ ನಡುವೆ ಸಂಭಾಷಣೆ ಸಾಧ್ಯವಾದಾಗಲೇ ಪರಿಪೂರ್ಣ ಮನುಷ್ಯ ಹುಟ್ಟಿಕೊಳ್ಳುತ್ತಾನೆ. ಮಣ್ಣನ್ನು ಹೊರತುಪಡಿಸಿದ ಅಭಿವೃದ್ಧಿಯ ಕಲ್ಪನೆ ಎಂದೂ ಸಮಗ್ರವಲ್ಲ. ಅದು ಮಗು ವಿರೋಧಿ. ಅಭಿವೃದ್ಧಿ ವಿರೋಧಿ.

No comments:

Post a Comment