Monday, May 13, 2013

ಆ ಯುವಕ ಕಪಾಳಮೋಕ್ಷ ಮಾಡಿದ್ದನಲ್ಲ, ನೆನಪಿದೆಯೇ ಶೆಟ್ಟರೆ?

https://mail-attachment.googleusercontent.com/attachment/?ui=2&ik=6079291e4d&view=att&th=13e9d973884f395f&attid=0.1&disp=inline&realattid=f_hgnjxndz0&safe=1&zw&saduie=AG9B_P9AdjG_6F_C-d01hjtY4eU8&sadet=1368449737401&sads=MD_g-j028X0Cd5ERihWzTFo6h3Y   ‘ಬಿ.ಎ. ಬಸವರಾಜ್, ವಿಜಯ್ ಕಾಶಪ್ಪನವರ್, ಡಿ.ಕೆ. ಶಿವಕುಮಾರ್, ಅನಿಲ್ ಲಾಡ್, ಮುನಿರತ್ನ.. ಇವರೆಲ್ಲ ಬಿಜೆಪಿಯವರಾ? ಭ್ರಷ್ಟಾಚಾರದ ವಿರುದ್ಧ ರಾಜ್ಯದ ಮಂದಿ ಮತ ಹಾಕಿದ್ದಾರೆ ಎಂದಾದರೆ ಇವರೇಕೆ ಗೆದ್ದು ಬಂದರು? ಇವರೇನು ಸಾಚಾಗಳೇ? ಭಾರತೀಯ ಅಪರಾಧ ಸಂಹಿತೆಯ (ಐ.ಪಿ.ಸಿ.) ಅಡಿಯಲ್ಲಿ ಬಸವರಾಜ್‍ರ ಮೇಲೆ 11 ಪ್ರಕರಣಗಳು ದಾಖಲಾಗಿವೆ. ಕಾಶಪ್ಪನವರ್‍ರ ಮೇಲೆ 5 ಪ್ರಕರಣಗಳಿವೆ. ಡಿ.ಕೆ. ಶಿವಕುಮಾರ್‍ರ ಆಸ್ತಿ ಕಳೆದ 5 ವರ್ಷಗಳಲ್ಲಿ 176 ಕೋಟಿಗೇರಿದೆ. ಗಣಿ ದನಿ ಅನಿಲ್ ಲಾಡ್‍ರ ಮೇಲೆ 86 ಎಕರೆ ಅರಣ್ಯ ಅಕ್ರಮ ಸ್ವಾಧೀನದ ಕೇಸು ಇದೆ. ಇವೆಲ್ಲ ಏನು, ಶಿಷ್ಟಾಚಾರವೇ? ಹೀಗಿದ್ದೂ ಇವರ ನ್ನೆಲ್ಲ 9, 16, 31, 19 ಸಾವಿರ ಮತಗಳ ಅಂತರದಿಂದ ಜನರು ಗೆಲ್ಲಿಸಿದ್ದೇಕೆ? ಕಾಂಗ್ರೆಸಿಗರೆಂದೇ? ನಿಜವಾಗಿ, ಇದು ಕಾಂಗ್ರೆಸ್ಸಿನ ಗೆಲುವಲ್ಲ. ಭ್ರಷ್ಟಾಚಾರದ ವಿರುದ್ಧ ಜನರ ಆಕ್ರೋಶವೂ ಅಲ್ಲ. ಯಡಿಯೂರಪ್ಪರ ಕೆಜೆಪಿ ಇಲ್ಲದೇ ಇರುತ್ತಿದ್ದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವ ಕನಸು ಕನಸಾಗಿಯೇ ಉಳಿಯುತ್ತಿತ್ತು..’ ಎಂದೆಲ್ಲ ಬಿಜೆಪಿಯ ಕೆಲವು ಅತೃಪ್ತ ಆತ್ಮಗಳು ಇವತ್ತು ಸಮರ್ಥಿಸಿಕೊಳ್ಳುತ್ತಿವೆ. ಅಷ್ಟಕ್ಕೂ ಯಡಿಯೂರಪ್ಪರೇನು ಕಾಂಗ್ರೆಸ್‍ನಿಂದ ಮುಖ್ಯಮಂತ್ರಿಯಾಗಿದ್ದರೇ? ಬಿಜೆಪಿಯಿಂದ ಸಿಡಿದು ಕೆಜೆಪಿ ಕಟ್ಟುವುದಕ್ಕೆ ಭ್ರಷ್ಟಾಚಾರ ಆರೋಪಗಳ ಹೊರತು ಅವರಿಗೆ ಬೇರೆ ಯಾವುದು ಕಾರಣ ಆಗಿತ್ತು? 2008ರಲ್ಲಿ ಇದೇ ಯಡಿಯೂರಪ್ಪರ ಬಿಜೆಪಿಯು ರಾಜ್ಯ ಜನತೆಯೊಂದಿಗೆ ಮತ ಯಾಚಿಸಿದ್ದು ಯಾವುದನ್ನು ಮುಂದಿಟ್ಟುಕೊಂಡು ಎಂಬುದನ್ನೊಮ್ಮೆ ನೆನಪಿಸಿಕೊಳ್ಳಿ. ಭ್ರಷ್ಟಾಚಾರ, ನೈತಿಕ ಪೊಲೀಸ್‍ಗಿರಿ, ಕೋಮುವಾದ, ಧಾರ್ಮಿಕ ತಾರತಮ್ಯಗಳನ್ನು ತನ್ನ ಚುನಾವಣಾ ಅಜೆಂಡಾವಾಗಿ ಯಡಿಯೂರಪ್ಪರು ಬಿಂಬಿಸಿದ್ದರೇ? ಇಲ್ಲವಲ್ಲ. ಕುಮಾರ ಸ್ವಾಮಿಯ ವಚನಭ್ರಷ್ಟತನವನ್ನು, ಗೋವಿನ ಹಾಡನ್ನು ಅವರು ಅಜೆಂಡಾವಾಗಿಸಿದ್ದರು. ಗೋವಿನಂತೆ ಎಲ್ಲ ಕ್ಷೇತ್ರಗಳಲ್ಲೂ ಪ್ರಾಮಾಣಿಕತೆಯನ್ನು ಕಾಪಾಡಿಕೊಳ್ಳುವುದಾಗಿ ವಚನ ಕೊಟ್ಟಿದ್ದರು. ಬಿಜೆಪಿ ರೈತರ ಪಕ್ಷ  ಅಂದರು. ಆದರೆ ಬಳಿಕ ಬಿಜೆಪಿ ಗುರುತಿಸಿಕೊಂಡದ್ದಾದರೂ ಯಾವ ಮುಖದೊಂದಿಗೆ? ಗೊಬ್ಬರ ಕೇಳಿದ ರೈತರಿಗೆ ಗುಂಡು ಹಾರಿಸಿದಲ್ಲಿಂದ ತೊಡಗಿ ಹೋಮ್‍ಸ್ಟೇ ದಾಳಿಯ ವರೆಗೆ ಬರೀ ವಿಕಾರ ಮುಖವನ್ನೇ ಅಲ್ಲವೇ? ಇವನ್ನೆಲ್ಲ ಅಡಗಿಸಿಟ್ಟು ಕೇವಲ ಕೆಜೆಪಿಯನ್ನು ಭೂತವಾಗಿ ನೋಡುವುದು ಎಷ್ಟು ಸೂಕ್ತ, ಸಮಂಜಸ?
ಮಿಸ್ಟರ್ ಗೋಲ್ಡನ್ ಸ್ಪೂನ್
ಇಟಲಿ ಮೇಡಮ್
50 ಕೋಟಿಯ ಗರ್ಲ್ ಫ್ರೆಂಡ್..
   ಎಂಬೆಲ್ಲ ಅಸಭ್ಯ ಪದಗಳನ್ನು ಬಳಸಿ ಭಾಷಣ ಮಾಡುವ ಮೋದಿ, ರಾಜ್ಯದ 3 ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಎಪ್ರಿಲ್ 28ರಂದು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಲಕ್ಷಾಂತರ ಮಂದಿ ಪಾಲ್ಗೊಂಡರು ಬಿಜೆಪಿಯೇ ಹೇಳಿಕೊಂಡಿತ್ತು. ಆದಿತ್ಯವಾರದಂದು ಅದೂ ಸಂಜೆಯ ಸಮಯದಲ್ಲಿ ಬೆಂಗಳೂರಿಗರನ್ನು ಲಕ್ಷಾಂತರ ಸಂಖ್ಯೆಯನ್ನು ಸೆಳೆಯುವ ಸಾಮರ್ಥ್ಯ  ಇರುವುದು ಮೋದಿಗೆ ಮಾತ್ರ ಎಂದೂ ಕೆಲವು ಮಾಧ್ಯಮಗಳು ಬರೆದುವು. ಸೋನಿಯಾ ಗಾಂಧಿ ಮತ್ತು ಅವರ ‘ಬಸ್-ಬಿರಿಯಾನಿ’ ಬೆಂಬಲಿಗರು ಇದರಿಂದ ಪಾಠ ಕಲಿಯಲಿ ಎಂದು ಕೆಲವರು ಟ್ವೀಟ್ ಮಾಡಿದರು. ಮೋದಿಯನ್ನು ವಾಜಪೇಯಿಗೆ, ವಲ್ಲಭಭಾಯಿಗೆ ಹೋಲಿಸಿ ಸಂತಸಪಟ್ಟರು.IRCC (Industrial Reseach and Consultancy Centre); ಗುಜರಾತ್‍ನ ಚುನಾವಣಾ ರಾಲಿಗಳು; ಇಂಡಿಯಾ ಟುಡೇ ಪತ್ರಿಕೆಯ ಸಮಾರಂಭ; FICCI (Federation of Indian Chambers of Commerce and Industry) ಮತ್ತು ಈಗ ಬೆಂಗಳೂರು.. ಎಲ್ಲೆಡೆಯೂ ಜನಸ್ತೋಮವೇ ಜನಸ್ತೋಮ. ಅವರ ಭಾಷಣಕ್ಕೆ ಇನ್ನಾರೂ ಸಾಟಿಯಿಲ್ಲ ಎಂದು ಬಿಜೆಪಿಗರು ಸಂಭ್ರಮಪಟ್ಟರು. ಸದ್ಯದ ಬಿಜೆಪಿ ವಿರೋಧಿ ಅಲೆಯು ಮೋದಿಯ ಪ್ರವಾಸದಿಂದಾಗಿ ಸರಿದು ಬಿಡಬಹುದು ಅನ್ನುವ ಪ್ರಚಾರವೂ ನಡೆಯಿತು. ಇದಕ್ಕೆ ಪೂರಕವಾಗಿ ಮೋದಿಯೂ ಸ್ಪಂದಿಸಿದರು. ರಾಹುಲ್ ಗಾಂಧಿಯನ್ನು ಮಿಸ್ಟರ್ ಗೋಲ್ಡನ್ ಸ್ಪೂನ್ ಎಂದು ಕರೆದು ಚಪ್ಪಾಳೆ ಗಿಟ್ಟಿಸಿಕೊಂಡರು. ಕಳೆದ ಅಕ್ಟೋಬರ್‍ನಲ್ಲಿ ನಡೆದ ಗುಜರಾತ್ ಚುನಾವಣೆಯ ವೇಳೆ ಇದೇ ಮೋದಿ, 'ಬೆಹೆನ್ ಸೋನಿಯಾ ಬೆನ್,  I bet you have lost mental balance - ಸೋನಿಯಾ ಗಾಂಧಿಯವರೇ, ನೀವು ಮಾನಸಿಕ ಸ್ಥಿಮಿತವನ್ನು ಕಳಕೊಂಡಿದ್ದೀರಿ - ಎಂದಿದ್ದರು. ಹಿಮಾಚಲ ಪ್ರದೇಶದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕೇಂದ್ರ ಸಚಿವ ಶಶಿ ತರೂರ್ ರನ್ನು ಉದ್ದೇಶಿಸಿ, ‘ತರೂರ್‍ರು ಸುನಂದಾ ಪುಷ್ಕರ್ ಎಂಬ 50 ಕೋಟಿ ರೂಪಾಯಿಯ ಗರ್ಲ್ ಫ್ರೆಂಡನ್ನು ಹೊಂದಿದ್ದಾರೆ..’ ಎಂದು ಲೇವಡಿ ಮಾಡಿದ್ದರು. ನಿಜವಾಗಿ, ಶಶಿ ತರೂರ್‍ಗೂ ಹಿಮಾಚಲ ಪ್ರದೇಶದ ಚುನಾವಣೆಗೂ ಯಾವ ಸಂಬಂಧವೂ ಇರಲಿಲ್ಲ. ಶಶಿ ತರೂರ್ ಅಲ್ಲಿಗೆ ಪ್ರಚಾರಕ್ಕೂ ಹೋಗಿರಲಿಲ್ಲ. ಆದ್ದರಿಂದಲೇ, ಮೋದಿಯ ಅಸಭ್ಯ ಮಾತಿಗೆ ರಾಷ್ಟ್ರಮಟ್ಟದಲ್ಲೇ ಟೀಕೆ ವ್ಯಕ್ತವಾಯಿತು. ಮೋದಿಗಿಂತ ಸುಮಾರು 20 ವರ್ಷ ಕಿರಿಯವನಾಗಿರುವ ರಾಹುಲ್ ಗಾಂಧಿಯ ಭಾಷೆ, ಪದ ಬಳಕೆ, ಮಾತಿನ ಧಾಟಿ, ಆಂಗಿಕ ಹಾವಭಾವಗಳು ಈ ದೇಶಕ್ಕೆ ಆದರ್ಶಪ್ರಾಯ ಅನ್ನಲಾಯಿತು. ಅಂದಹಾಗೆ, ಗುಜರಾತ್‍ನಲ್ಲಿ ಪ್ರಯೋಗಿಸಿ ಯಶಸ್ವಿಯಾಗಿರುವ ಅಸಭ್ಯ ಭಾಷೆ, ಪದ ಬಳಕೆಯನ್ನು ದೇಶದ ಉದ್ದಗಲಕ್ಕೂ ಮೋದಿ ಕೊಂಡೊಯ್ಯುತ್ತಿರುವುದು ಏನನ್ನು ಸೂಚಿಸುತ್ತದೆ? 2002ರ ಹತ್ಯಾಕಾಂಡಕ್ಕೆ ಅವರ ಅಸಭ್ಯ ಆಲೋಚನೆ ಮತ್ತು ಅಸಭ್ಯ ಹೋಲಿಕೆಗಳೇ ಕಾರಣವಾಗಿತ್ತು. ಆ ಬಗ್ಗೆ ಅವರಲ್ಲಿ ಇನ್ನೂ ಪಶ್ಚಾತ್ತಾಪ ಮೂಡಿಲ್ಲ ಎಂದಲ್ಲವೇ ಇದರರ್ಥ? ಮಾತ್ರವಲ್ಲ, ಈ ದೇಶದಲ್ಲಿ ಇಂಥ ಆಲೋಚನಗಳಿಂದ ಮಾತ್ರ ಅಧಿಕಾರ ಗಿಟ್ಟಿಸಲು ಸಾಧ್ಯ ಎಂದು ಅವರು ನಂಬಿರುವುದಕ್ಕೆ ಪುರಾವೆಯಲ್ಲವೇ ಇದು? ಆದರೆ ಹಿಮಾಚಲ ಪ್ರದೇಶದ ಮತದಾರರು ಮೋದಿಯನ್ನು ಅವರ ಕೆಳದರ್ಜೆಯ ಭಾಷೆಯ ಸಮೇತ ಹೊರಕ್ಕಟ್ಟಿದರು. ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್‍ನ ಕೈ ಹಿಡಿದರು. ಆ ಬಳಿಕ ಮೋದಿ ಬಂದದ್ದು ನೇರ ಕರ್ನಾಟಕಕ್ಕೆ. 37 ವಿಧಾನ ಸಭಾ ಸ್ಥಾನಗಳನ್ನು ಹೊಂದಿರುವ ಬೆಂಗಳೂರು, ಬೆಳಗಾವಿ ಮತ್ತು ದಕ್ಷಿಣ ಕನ್ನಡದಲ್ಲಿ ಭಾಷಣ ಮಾಡಿದರು. ಇದೀಗ ಈ 37ರಲ್ಲಿ ಜುಜುಬಿ ಸ್ಥಾನಗಳಷ್ಟೇ ಬಿಜೆಪಿಗೆ ದಕ್ಕಿವೆ. ಏನಿದರ ಅರ್ಥ? ಮೋದಿ ಗುಜರಾತ್‍ಗಿಂತ ಹೊರಗೆ ಅಸ್ಪೃಶ್ಯ ಎಂದಲ್ಲವೇ? ಮೋದಿಯನ್ನು ಅವರ ಈಗಿನ ವೇಷದಲ್ಲಿ ಈ ದೇಶದ ಮಂದಿ ಪ್ರಧಾನಿಯಾಗಿ ಒಪ್ಪಿಕೊಳ್ಳುವುದಿಲ್ಲ ಅನ್ನುವುದಕ್ಕೆ ಬೇರೆ ಯಾವ ಪುರಾವೆ ಬೇಕು? ರಾಹುಲ್ ಗಾಂಧಿಯ ಸಭ್ಯತನದ ಎದುರು ಮೋದಿಯ ಅಸಭ್ಯತನ ತೀವ್ರ ವೈಫಲ್ಯ ಹೊಂದಿರುವುದಕ್ಕೆ ಈ ಚುನಾವಣೆಯನ್ನು ಯಾಕೆ ಆಧಾರವಾಗಿ ಪರಿಗಣಿಸಬಾರದು?
   ಹಾಗಂತ ಈ ಒಂದೇ ಕಾರಣಕ್ಕೆ ಮೋದಿ ಕನ್ನಡಿಗರಿಂದ ತಿರಸ್ಕøತರಾದರು ಎಂದಲ್ಲ..
2012 ಜುಲೈ 20ರಂದು ಅಮೇರಿಕದ ಅರೋರದಲ್ಲಿರುವ ಸಿನಿಮಾ ಥಿಯೇಟರ್‍ನಲ್ಲಿ 25 ವರ್ಷದ ಜೇಮ್ಸ್ ಹೋಲ್‍ಮ್ಸ್ ಎಂಬ ಯುವಕ ಮನ ಬಂದಂತೆ ಗುಂಡು ಹಾರಿಸುತ್ತಾನೆ. 12 ಮಂದಿ ಸಾವಿಗೀಡಾಗಿ 58 ಮಂದಿ ಗಾಯಗೊಳ್ಳುತ್ತಾರೆ. 2012 ಡಿಸೆಂಬರ್ 14ರಂದು ಕನೆಕ್ಟಿಕಟ್‍ನಲ್ಲಿರುವ ಪ್ರಾಥಮಿಕ ಶಾಲೆಗೆ ನುಗ್ಗಿದ ಆಡಮ್ಸ್ ಲ್ಯಾನ್ಸಾ, 20 ಪುಟ್ಟ ಮಕ್ಕಳ ಸಹಿತ 26 ಮಂದಿಯನ್ನು ಗುಂಡು ಹಾರಿಸಿ ಕೊಲ್ಲುತ್ತಾನೆ. 2012 ಆಗಸ್ಟ್ 5ರಂದು 41 ವರ್ಷದ ವಾಡೆ ಮೈಕೆಲ್ ಪೇಜ್ ಎಂಬಾತ ಓಕ್ರೀಕ್‍ನಲ್ಲಿರುವ ಸಿಕ್ಖ್ ಮಂದಿರಕ್ಕೆ ದಾಳಿಯಿಟ್ಟು 6 ಮಂದಿಯನ್ನು ಕೊಂದು 4 ಮಂದಿಯನ್ನು ಗಾಯಗೊಳಿಸುತ್ತಾನೆ. ಅಮೇರಿಕದಲ್ಲಿ ಪ್ರತಿ ವರ್ಷ 30 ಸಾವಿರ ಮಂದಿ ಕೇವಲ ಬಂದೂಕು ಸಂಸ್ಕ್ರಿತಿಗೇ ಬಲಿಯಾಗುತ್ತಿದ್ದಾರೆ. ಅದರಲ್ಲೂ ಕಳೆದ 4 ತಿಂಗಳುಗಳಲ್ಲಿ 3,531 ಮಂದಿ ಬಂದೂಕಿಗೆ ಬಲಿಯಾಗಿದ್ದಾರೆ. ಇದು 9/11 ಘಟನೆಯಲ್ಲಿ ಸಾವಿಗೀಡಾದವರ ಸಂಖ್ಯೆಗಿಂತಲೂ ಹೆಚ್ಚು (ದಿ ಹಿಂದು, 2013 ಮೇ 3). ಆದರೂ ಅಮೇರಿಕ ಇವನ್ನೆಲ್ಲ ಮಾನಸಿಕ ಅಸ್ವಸ್ಥತೆಗೆ ಒಳಗಾದ ಯುವಕರ ಕೃತ್ಯ ಎಂದು ವ್ಯಾಖ್ಯಾನಿಸಿದೆಯೇ ಹೊರತು ಭಯೋತ್ಪಾದನಾ ಕೃತ್ಯವೆಂದಲ್ಲ. ಯುವಕರು ಗನ್ ಖರೀದಿಸುವಾಗ ಅವರ ಹಿನ್ನೆಲೆಯನ್ನು ತನಿಖಿಸಬೇಕು ಎಂಬ ಮಸೂದೆಗೆ ಅಮೇರಿಕದ ಪಾರ್ಲಿಮೆಂಟಲ್ಲಿ ಮೊನ್ನೆ ಮೊನ್ನೆ ಸೋಲಾದದ್ದು ಇದೇ ಕಾರಣದಿಂದ. ಆದರೆ ಕಳೆದ ಎಪ್ರಿಲ್ 15ರಂದು ಬಾಸ್ಟನ್ ಮ್ಯಾರಥಾನ್‍ನಲ್ಲಿ ನಡೆದ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿರುವುದು ಇಂಥದ್ದೇ ಇಬ್ಬರು ಯುವಕರಾಗಿದ್ದರೂ ಅವರು ಚೆಚೆನ್ ಮೂಲದವರೆಂದು ಗೊತ್ತಾದ ಕೂಡಲೇ ಅಮೇರಿಕ ಇಡೀ ಕೃತ್ಯವನ್ನು ಭಯೋತ್ಪಾದನಾ ಕೃತ್ಯ ಎಂದಿತು. ಅವರು ಈ ಮೊದಲು ತಮ್ಮ ದೇಶವಾದ ಚೆಚೆನ್‍ಗೆ ಭೇಟಿ ಕೊಟ್ಟದ್ದನ್ನೇ ಇದಕ್ಕೆ ಪುರಾವೆಯಾಗಿ ಬಳಸಿಕೊಂಡಿತು. ಅಷ್ಟಕ್ಕೂ ಬಂದೂಕು ಸಿಡಿಸುವವರು ಮಾನಸಿಕ ಅಸ್ವಸ್ಥರು ಮತ್ತು ಬಾಂಬ್ ಸಿಡಿಸುವವರು ಭಯೋತ್ಪಾದಕರು ಅನ್ನುವುದು ಎಷ್ಟು ಸಮರ್ಥನೀಯ? ಹಾಗೆ ಬೇರ್ಪಡಿಸಿ ನೋಡುವುದಕ್ಕೆ ಯಾವುದು ಮಾನದಂಡ? ಮುಸ್ಲಿಮ್ ಹೆಸರೇ, ನಮಾಝೇ, ಮೂಲ ದೇಶವೇ? ಅಮೇರಿಕದ ಗನ್ ಕಲ್ಚರ್‍ನಿಂದ ಪ್ರಭಾವಿತರಾಗಿ ಈ ಯುವಕರು ಬಾಂಬ್ ಇಡಬಾರದೆಂದಿದೆಯೇ? ಸಾಮಾಜಿಕ ಅಸ್ಪೃಶ್ಯತೆ, ಮಾನಸಿಕ ಸಮಸ್ಯೆ ಅಥವಾ ರಾಜಕೀಯೇತರ ಕಾರಣಗಳು ಅವರ ಬಾಂಬ್‍ನ ಹಿಂದಿರಬಾರದೇಕೆ? ಅಲ್ಲದೇ ಬಾಂಬ್ ಭಯೋತ್ಪಾದನೆಯ ವಿರುದ್ಧ ಗಂಭೀರವಾಗುವ ಅಮೇರಿಕ ಬಂದೂಕು ಭಯೋತ್ಪಾದನೆಯ ಕುರಿತಂತೆ ಯಾಕೆ ಮೃದುವಾಗಿದೆ? ಏನಿದರ ಮರ್ಮ? ಮುಸ್ಲಿಮ್ ರಾಷ್ಟ್ರಗಳ ಮೇಲೆ ಏರಿ ಹೋಗುವುದಕ್ಕಾಗಿ ಅಮೇರಿಕ ಈ ಭಯೋತ್ಪಾದನಾ ಗುಮ್ಮವನ್ನು ಬಳಸುತ್ತಿದೆಯೇ? ಯಾಕೆ ಈ ದ್ವಂದ್ವ..’ ಎಂದೆಲ್ಲಾ 2013 ಮೇ 3ರಂದು ದಿ ಹಿಂದೂವಿನಲ್ಲಿ ನಾರಾಯಣ್ ಲಕ್ಷ್ಮಣ್ ಎಂಬ ಹಿರಿಯ ಬರಹಗಾರರು ಪ್ರಶ್ನಿಸಿದ್ದರು.
   ಭಾರತವನ್ನು ಮಾತೆ ಅನ್ನುವ; ಸಂಸ್ಕ್ರಿತಿ, ಅಸ್ಮಿತೆಯ ಬಗ್ಗೆ ಬಾಯಿ ತುಂಬಾ ಮಾತಾಡುವ ಮೋದಿ ಪ್ರದರ್ಶಿಸುತ್ತಿರುವುದೂ ಈ ದ್ವಂದ್ವವನ್ನೇ ಅಲ್ಲವೇ? ಇಲ್ಲದಿದ್ದರೆ, ಪಕ್ಷಕ್ಕಿಂತ ದೇಶ ದೊಡ್ಡದು ಅನ್ನುವ ಮೋದಿ, ಚುನಾವಣಾ ಪ್ರಚಾರದ ವೇಳೆ ಬಿಜೆಪಿಯ ಭ್ರಷ್ಟಾಚಾರವನ್ನೇಕೆ ಪ್ರಸ್ತಾಪಿಸುತ್ತಿಲ್ಲ? ಬಿಜೆಪಿ ದೇಶಕ್ಕಿಂತ ದೊಡ್ಡದೇ ಅಥವಾ, ಕಾಂಗ್ರೆಸ್ ಭ್ರಷ್ಟಾಚಾರ ಎಸಗಿದರೆ ತಪ್ಪು, ಬಿಜೆಪಿಯಾದರೆ ಸರಿ ಎಂಬ ನಿಲುವೇ? ಇಂಥ ದ್ವಂದ್ವವನ್ನು ಇಟ್ಟುಕೊಂಡ ವ್ಯಕ್ತಿ ಈ ದೇಶವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯು ತ್ತೇನೆಂದು ಹೇಳುತ್ತಾರಲ್ಲ, ಯಾವ ಅಭಿವೃದ್ಧಿ? ಯಾರ ಅಭಿವೃದ್ಧಿ? ನಾಳೆ; ಮುಸ್ಲಿಮರಿಗೆ ಒಂದು ನೀತಿ, ಹಿಂದೂಗಳಿಗೆ ಇನ್ನೊಂದು ನೀತಿ ಎಂಬ ಮಾದರಿಯನ್ನು ಅವರು ಜಾರಿ ಮಾಡಿದರೆ? ಈಗಾಗಲೇ ಗುಜರಾತ್‍ನಲ್ಲಿ ಅವರು 'ಮಾದರಿ'ಯಾಗಿ ಒಪ್ಪಿಕೊಂಡಿರುವುದು ಇಂಥ ನಿಲುವನ್ನೇ ತಾನೇ? ಬಹುಶಃ ಇಂಥ ದ್ವಂದ್ವ ನಿಲುವನ್ನು ಪರಿಗಣಿಸಿಯೇ ರಾಜ್ಯದ ಮಂದಿ ಮೋದಿ ವಿರುದ್ಧ ಓಟು ಹಾಕಿರಬಾರದೇಕೆ?
   ಅಷ್ಟಕ್ಕೂ, ಬಿಜೆಪಿಯ ಕೋಮುವಾದದ ವಿರುದ್ಧ ಜನರು ಸಿಡಿದೆದ್ದಿದ್ದಾರೆ ಅನ್ನುವುದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಫಲಿತಾಂಶವೇ ಪುರಾವೆ.
   ಊರಿನ ಹತ್ತು ಮಂದಿಗೂ ಪರಿಚಯ ಇಲ್ಲದ ನಳಿನ್ ಕುಮಾರ್ ಕಟೀಲ್ ಎಂಬವರನ್ನು ಜನಾರ್ಧನ ಪೂಜಾರಿ ವಿರುದ್ಧ ನಿಲ್ಲಿಸಿ ಸಂಸತ್ತಿಗೆ ಕಳುಹಿಸಿದ್ದು ಇಲ್ಲಿನ ಸಂಘಪರಿವಾರ. ನಿಜವಾಗಿ, ಈ ಜಿಲ್ಲೆಯಲ್ಲಿ ಭ್ರಷ್ಟಾಚಾರ ಇಶ್ಶೂವೇ ಅಲ್ಲ. ಎಲ್ಲ ಇಶ್ಶೂವನ್ನೂ ತಿಂದು ಮುಗಿಸುವಷ್ಟು ಪ್ರಮಾಣದಲ್ಲಿ ಪರಿವಾರ ಇಲ್ಲಿ ಕೋಮುವಾದವನ್ನು ಬೆಳೆಸಿಬಿಟ್ಟಿದೆ. ಈ ಬಾರಿ ಮಟಂದೂರು ಮತ್ತು ರಾಜೇಶ್ ನೈಕ್ ಎಂಬಿಬ್ಬರು ಅಪರಿಚಿತರನ್ನು ಸಂಘಪರಿವಾರವೇ ಅಭ್ಯರ್ಥಿಯಾಗಿ ನಿಲ್ಲಿಸಿತ್ತು. ‘ಇವರು ಯಾರು, ಇವರ ಯೋಗ್ಯತೆ ಏನು ಎಂದೆಲ್ಲ ಪ್ರಶ್ನಿಸಬಾರದು. ಸಂಘ ನಿಲ್ಲಿಸಿದೆ, ಆದ್ದರಿಂದ ಓಟು ಹಾಕಬೇಕು..’ ಎಂಬ ಗುಲಾಮ ಮನಸ್ಥಿತಿಯನ್ನು ಜಿಲ್ಲೆಯಲ್ಲಿ ಸಂಘಪರಿವಾರ ಈ ಮೊದಲು ಬೆಳೆಸಿತ್ತು. ಆದರೆ ಈ ಬಾರಿ ಮತದಾರರು ಅದನ್ನು ಪ್ರಶ್ನಿಸಿದ್ದಾರೆ. ಒಂದು ರೀತಿಯಲ್ಲಿ, ಕರಾವಳಿಯಲ್ಲಿ ಬಿಜೆಪಿಯ ಓಟ್ ಬ್ಯಾಂಕೇ ದನ, ನೈತಿಕ ಪೊಲೀಸ್‍ಗಿರಿಗಳು. ಆದರೆ 2012ರಲ್ಲಿ ನಡೆದ ಹೋಮ್‍ಸ್ಟೇ ದಾಳಿಯು ಕರಾವಳಿಯಲ್ಲಿ ಹೊಸ ಬಗೆಯ ಆಲೋಚನೆಗೆ ದಾರಿ ಮಾಡಿಕೊಟ್ಟಿತು. ದಾಳಿಯ ಆರೋಪದಲ್ಲಿ ಬಂಧಿತರಾದ ಬಿಲ್ಲವ, ಮುಗೇರ ಯುವಕರು ಇನ್ನೂ ಜೈಲಲ್ಲೇ ಇದ್ದಾರೆ. ಈ ಹಿಂದೆ ದನ, ನೈತಿಕತೆಯ ಹೆಸರಲ್ಲಿ ಮುಸ್ಲಿಮ್ ಯುವಕರ ಮೇಲೆ ದಾಳಿ ಮಾಡಿದವರು ಈಗಲೂ ಕೋರ್ಟಿಗೆ ಅಲೆಯುತ್ತಿದ್ದಾರೆ. ಬಹುಶಃ ಸಂಘದ ಹಿಡಿತದಿಂದ ಹೊರಬಂದು ಸ್ವತಂತ್ರವಾಗಿ ಆಲೋಚಿಸಲು ಈ ಭಾಗದ ಜನರನ್ನು ಇದುವೇ ಪ್ರೇರೇಪಿಸಿರಬೇಕು. ಇಲ್ಲದಿದ್ದರೆ, ಜಿಲ್ಲೆಯ 60 ಸಾವಿರದಷ್ಟು ಹೊಸ ಮತದಾರರು ಬಹುತೇಕ ಬಿಜೆಪಿಗೆ ವಿರುದ್ಧವಾಗಿ ಈ ಬಾರಿ ಮತ ಚಲಾಯಿಸಲು ಸಾಧ್ಯವಿತ್ತೇ? ಕಳೆದೆರಡು ದಶಕಗಳಲ್ಲಿ ಇದೇ ಮೊದಲ ಬಾರಿ ಯುವಕರು ಈ ಮಟ್ಟದಲ್ಲಿ ಬಿಜೆಪಿಯನ್ನು ತಿರಸ್ಕರಿಸಲು ಬೇರೆ ಯಾವ ಕಾರಣವಿದೆ? ಮುಸ್ಲಿಮ್ ಮತಗಳು ಕೆಲವು ಮುಸ್ಲಿಮ್ ಅಭ್ಯರ್ಥಿಗಳಲ್ಲಿ ಈ ಬಾರಿ ಈ ಹಿಂದಿಗಿಂತ ಹೆಚ್ಚಿನ ಪ್ರಮಾಣದಲ್ಲೇ  ಹಂಚಿಹೋಗಿದೆ. ಹಾಗಿದ್ದೂ ಯು.ಟಿ. ಕಾದರ್, ರಮಾನಾಥ ರೈ, ಶಕುಂತಲಾ ಶೆಟ್ಟಿಯೆಲ್ಲಾ  ಈ ಹಿಂದಿಗಿಂತ ಮೂರ್ನಾಲ್ಕು ಪಟ್ಟು ಅಧಿಕ ಅಂತರದಲ್ಲಿ ಗೆದ್ದಿರುವುದು ಏನನ್ನು ಸೂಚಿಸುತ್ತದೆ? ಬಿಜೆಪಿಯನ್ನು ಅದರ ಬೆಂಬಲಿಗರೇ ಕೈ ಬಿಟ್ಟಿದ್ದಾರೆ ಎಂಬುದನ್ನಲ್ಲವೇ? ಬಿಜೆಪಿಯಿಂದ ಎಲೆಕ್ಟ್ರಿಕ್ ಕಂಭವನ್ನು ನಿಲ್ಲಿಸಿದರೂ ಗೆಲುವು ಗ್ಯಾರಂಟಿ ಎಂಬಂತಿದ್ದ ಕರಾವಳಿ ಪ್ರದೇಶದಲ್ಲಿ ಬಿಜೆಪಿ ನೆಲಕಚ್ಚಿದ್ದು ಯಡಿಯೂರಪ್ಪರಿಂದ ಖಂಡಿತ ಅಲ್ಲ. ಕಾಂಗ್ರೆಸ್‍ನಿಂದಲೂ ಅಲ್ಲ. ಹಾಗಾದರೆ ಯಾರಿಂದ? ಸಂಘಪರಿವಾರದಿಂದಲೇ, ಅದರ ನೈತಿಕ ಪೊಲೀಸ್‍ಗಿರಿಯಿಂದಲೇ, ಕೋಮು ಅಜೆಂಡಾದಿಂದಲೇ?
   ಹೋಮ್‍ಸ್ಟೇ ದಾಳಿಯ ವೇಳೆ ಯುವಕನೋರ್ವ ಹೆಣ್ಣು ಮಗಳಿಗೆ ಕಪಾಲಮೋಕ್ಷ  ಮಾಡುವ ದೃಶ್ಯ ಎಲ್ಲ ಮಾಧ್ಯಮಗಳಲ್ಲೂ ಪ್ರಕಟವಾಗಿತ್ತು. ಇದೀಗ ರಾಜ್ಯದ ಮಂದಿ ಅದನ್ನು ಬಡ್ಡಿ ಸಮೇತ  ತೀರಿಸಿದ್ದಾರೆ.
ನೆನಪಿರಲಿ ಸಿದ್ಧರಾಮಯ್ಯರೇ...

1 comment:

  1. ಕರ್ನಾಟಕದ ಜನ ಕಾಂಗ್ರೆಸ್ಸನ್ನು ಆರಿಸಿದ್ದಾರೆ.
    ಅದು ಭಾಜಪಕ್ಕೆ ಪಾಠ ಕಲಿಸಲೆಂದೇ ಇರಬಹುದು, ಅಥವಾ ಸಂಘ ಪರಿವಾರದಿಂದ ರೋಸಿ ಹೋಗಿ ಇರಬಹುದು.
    ಆದರೆ, ಕಾಂಗ್ರೆಸ್ಸು ಈ ದೇಶದಲ್ಲಿ ಏನೇನೆಲ್ಲ ಮಾಡಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ.
    ಆರ್ಥಿಕ ತಜ್ಞರಾಗಿ ಹೆಸರು ಮಾಡಿದ್ದ ಡಾ||ಮನಮೋಹನ ಸಿಂಗ್ ಅವರನ್ನು ಯಾವರೀತಿ "ಪಂಜರದ ಗಿಣಿ" ಮಾಡಿ, "ಜೋಕರ್" ಎಂದು ಜನರೆಲ್ಲಾ ಹಾಸ್ಯ ಮಾಡುವಂತೆ ಮಾಡಿದ್ದು ಯಾರ ಸಾಧನೆ?
    ಕರ್ನಾಟಕದಲಿಯೂ ಹಿಂದೆ ಕಾಂಗ್ರೆಸ್ ಸರಕಾರಗಳು ಆಳಿವೆ. ಎಲ್ಲವೂ ಸರಿಯಿದ್ದಿದ್ದರೆ, ಕಾಂಗ್ರೆಸ್ಸು ಪ್ರಾಮಾಣಿಕ ಆಡಳಿತ, ಅಭಿವೃದ್ಧಿಗೇ ಗಮನ ಕೊಟ್ಟಿದ್ದರೆ ಜನತಾ ಪರಿವಾರದ ಪಕ್ಷಗಳಾಗಲಿ, ಭಾಜಪವಾಗಲೀ ತಲೆಯೆತ್ತಲು ಸಾಧ್ಯವಾಗುತ್ತಿರಲಿಲ್ಲ.
    ಜನ ಕಾಂಗ್ರೆಸ್ಸನ್ನು ಏಕೆ ತಿರಸ್ಕರಿಸಿದರು ಎನ್ನುವುದೂ ಅಧ್ಯಯನ ಯೋಗ್ಯವೇ.
    ಪ್ರಜಾತಂತ್ರದಲ್ಲಿ ಪಕ್ಷಗಳು ಬದಲಾಗುತ್ತಿರುತ್ತವೆ, ಹೊಸ ಸರಕಾರಗಳು ಬರುತ್ತಿರುತ್ತವೆ. ಇದು ಒಳ್ಳೆಯದೇ ಅಲ್ಲವೆ?
    ಆದರೆ, ಅದೇ ಕಾರಣವನ್ನು ಹಿಡಿದು, ನರೇಂದ್ರ ಮೋದಿಯವರನ್ನು ಹಿಗ್ಗಾಮುಗ್ಗಾ ಬೈಯ್ಯುವುದು ಲೇಖಕರ ಮನಸ್ಸಿನಲ್ಲಿರುವ ಧ್ವೇಷದ ಸೂಚಕ ಅಷ್ಟೇ.

    ಪ್ರಜಾಪ್ರಭುತ್ವದಲ್ಲಿ ಬಹುಮತವನ್ನು ಮಾನ್ಯ ಮಾಡಲೇಬೇಕು. ಆದರೆ, ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ಕಾಂಗ್ರೆಸ್ಸು ಹೊರಟಿರುವ ದಾರಿ ಸರಿಯಿಲ್ಲ ಎಂದು ಎಲ್ಲರಿಗೂ ಅನಿಸಲು ಪ್ರಾರಂಭವಾಗಿದೆ. ಇದೇ ರೀತಿ ಕಾಂಗ್ರೆಸ್ ಮುಂದುವರೆದರೆ, ಮುಂದಿನ ವರ್ಷ ಬರುವ ಲೋಕಸಭಾ ಚುನಾವಣೆಯಲ್ಲಿ, ಕರ್ನಾಟಕದಲ್ಲಿ ಅದಕ್ಕೆ ಹಿಂದಿಗಿಂತಲೂ ಕಡಿಮೆ ಸ್ಥಾನ ಲಭಿಸಿದರೆ ಆಶ್ಚರ್ಯವಿಲ್ಲ. ಆಗ ಅದು ಮೋದಿಯ ಮೋಡಿಯೋ, "ಸಿಲ್ವರ್ ಸ್ಪೂನಿ"ನ ಮೋಡಿಯೋ, "inner voice"ನ ಮೋಡಿಯೋ ವಿಶ್ಲೇಷಣೆ ಮಾಡಿರಿ.

    ಸಿದ್ದರಾಮಯ್ಯನವರ ಘೋಷಣೆಗಳ ಕುರಿತಾಗಿ ಜನರ ಭಾವನೆ ಹೇಗಿದೆ ಎನ್ನುವುದಕ್ಕೆ:
    http://twitter.com/srivathsacm/status/339411949399990272/photo/1

    ReplyDelete